ಬೆಳದಿಂಗಳ ಹನಿಗಳು
1
ಅಮವಾಸ್ಯೆಯ ಕತ್ತಲಾದ ಕೂಸು
ಬೆಳದಿಂಗಳಾಗಿ ಮತ್ತೆ ಹುಟ್ಟಿದ್ದಾಳೆ
ಬತ್ತಿ ಹೋದ ಕಂಗಳಲ್ಲಿಂದು
ಆನಂದಬಾಷ್ಪ;
*
2
ಕನಸುಗಳು ಕಳೆದು ಹೋಗಿದ್ದವು
ಮಣ್ಣ ಕಣಕಣದಲ್ಲೂ
ಮೊಣಕಾಲೂರಿ ತಡಕಾಡಿದ್ದೆವು,
ಇಗೋ
ಮತ್ತೆ ಮಡಿಲು ಸೇರಿದ್ದಾಳೆ!
3
ಲೇಬರ್ ವಾರ್ಡಿನ ಮುಂದೆ
ಬಸಿರ ನೋವನನ್ನನುಭವಿಸುತ್ತಿದ್ದೆ
ಮಗಳು ಮತ್ತೆ ಹುಟ್ಟಿ ಬಂದಳು
ಜತೆಗೆ ನಾನೂ ಕೂಡಾ!
4
ತಂಗಿಯೇ ಬೇಕೆಂದು
ಹಟಕ್ಕೆ ಬಿದ್ದ ಮುದ್ದುಮಗಳಿಗೆ
ಇದೀಗ
ಗೆದ್ದ ಸಂಭ್ರಮ
ಬಹುಶಃ
ತಂಗಿ ಮಾತು ಕೊಟ್ಟಿರಬೇಕೇನೋ;
*
5
ನಿರೀಕ್ಷೆ ಎಂದರೇನು?
ಕನಸು
ಬಸಿರಾಗುವುದು
ಬಸಿರು ಉಸಿರಾಗುವುದು
ಮತ್ತು ಉಸಿರು ನನಸಾಗುವುದು
6
ಕಂಗಾಲಾಗಿದ್ದ ಹೆಂಡತಿಗೆ
ನವಮಾಸವೂ ಆತಂಕವೇ
ಇದೀಗ ತಾಯಿ ಮಗುವಾಗಿದ್ದಾಳೆ
ಮತ್ತು ಮಗು ತಾಯಿಯ ತಾಯಿ;
- ಜಾನ್ ಸುಂಟಿಕೊಪ್ಪ .
posted from Bloggeroid
Comments
Post a Comment