ಸಮೀಕ್ಷೆ
ಸಮೀಕ್ಷೆ - 1
ಹೊರಗೆ ಜೋರು ಮಳೆ. ಆ ಜೋರು ಮಳೆಯಲ್ಲೇ ನೆನೆದು ತೊಪ್ಪೆಯಾಗಿ ಬಂದ ಸಮೀಕ್ಷೆ ಬಾಗಿಲ ಬಳಿ ನಿಂತು ಕೆಲಸ ಆರಂಭಿಸಿತು.
ಪ್ರಶ್ನೆ : ಅದು ಉಂಟಾ?
ಉತ್ತರ : ಇಲ್ಲ
ಪ್ರಶ್ನೆ : ಇದು ಉಂಟಾ?
ಉತ್ತರ : ಛೇ.. ಏನೂ ಇಲ್ಲ..
ಪ್ರಶ್ನೆ : ಅದು ಎಷ್ಟಿದೆ?
ಉತ್ತರ : ಏನಿಲ್ಲ
ಪ್ರಶ್ನೆ : ಅದು ಇಲ್ಲವಾ?
ಉತ್ತರ : ಎಂಥದೂ ಇಲ್ಲ..
ಪ್ರಶ್ನೆ : ಮತ್ತೆ ಇ...
ಉತ್ತರ : ನಿಮಗ್ಯಾಕೆ ಇದೆಲ್ಲಾ? ಏನಿಲ್ಲ, ಏನೂ ಇಲ್ಲ...
ಪ್ರಶ್ನಿಸುವವರು : ಸರಿ ಬಿಡಿ.....
ನೆನೆದು ತೊಪ್ಪೆಯಾದ ಸಮೀಕ್ಷೆ ಜೋರು ಮಳೆಯಲ್ಲಿ ಮತ್ತೊಂದು ಮನೆಗೆ ಹೊರಡುವಷ್ಟರಲ್ಲಿ ಒಳಗಿನಿಂದ ಉತ್ತರಿಸುವವರು ಹೇಳಿದ್ದು ಸಿಡಿಲಿನಂತೆ ಕೇಳಿಸಿತು..
" ಹೀಗೆ ಹುಚ್ಚುಮಳೆ ಹೊಯ್ದರೆ ಈ ಸಲ ಕರಿಮೆಣಸು ಎಂಟು ಟನ್ ಸಿಗೋದೂ ಡೌಟೇಯಾ.."
ನೆನೆದು ತೊಪ್ಪೆಯಾದ ಸಮೀಕ್ಷೆ ಒಂದು ಟನ್ನಿನ ಬೆಲೆ ಇಷ್ಟಾದರೆ ಎಂಟು ಟನ್ನಿನ ಬೆಲೆ ಎಷ್ಟು ಎಂದು ಬಡಬಡಿಸುತ್ತಾ ಬೇರೆ ಮನೆ ಹುಡುಕುತ್ತಾ ಹೋಯಿತು.. ಇದನ್ನೆಲ್ಲಾ ನೋಡುತ್ತಿದ್ದ ಮನೆಯಲ್ಲಿದ್ದ SUV ಕಾರು, ಅದು ಇದು ಮುಂತಾದವೆಲ್ಲಾ ಪಕಪಕನೇ ನಕ್ಕುಬಿಟ್ಟವು...
ಸಮೀಕ್ಷೆ - 2
ನೆನೆದು ತೊಪ್ಪೆಯಾದ ಸಮೀಕ್ಷೆ ಅದು ಹೇಗೋ ಕಷ್ಟಪಟ್ಟು ಮನೆ ಹುಡುಕಿ ತಲುಪಿ ಬಿಟ್ಟಿತು. ಗೇಟಿನಿಂದಲೇ ಬಾಯಿಗೆ ಬಂದಂತೆ ಬೊಗಳುತ್ತಿದ್ದ ನಾಯಿ ಏನು ಹೇಳಿದ್ದು ಅಂತಾನೆ ಗೊತ್ತಾಗ್ಲಿಲ್ಲ.. ಆಮೇಲೆ ಮನೆಯವರು ಅದನ್ನ ಅರ್ಥ ಆಗೋ ಭಾಷೆಯಲ್ಲಿ ಹೇಳಿದ್ರು.
"ಯಾರೋ ಬಂದು ಮಾಡಿ ಹೋದ್ರು..."
ಬಾಯಿಗೆ ಬಂದಂತೆ ಬೊಗಳುತ್ತಿದ್ದ ನಾಯಿ ಈಗ ನೆನೆದು ತೊಪ್ಪೆಯಾದವನನ್ನು ಕರುಣೆಯಿಂದ ದಿಟ್ಟಿಸಿ ನೋಡಿತು... ಬೊಗಳಲಿಲ್ಲ..
ಅದಕ್ಕೆ ಮನುಷ್ಯತ್ವ ಇದೆ.
ಸಮೀಕ್ಷೆ - 3
ನೆನೆದು ತೊಪ್ಪೆಯಾದ ಸಮೀಕ್ಷೆಗೆ ರಾತ್ರಿಯಿಡೀ ಜ್ವರ...
ಬೆಳಗ್ಗೆ ಬೇಗನೆದ್ದು ಎಲ್ಲಾ ಸಿದ್ಧಪಡಿಸಿ ಹೊರಟು ಪರಿಚಯವಿಲ್ಲದ ಹಳ್ಳಿಯಲ್ಲಿ ಕಾಫಿ ತೋಟಗಳ ನಡುವೆ ಮನೆ ಹುಡುಕುತ್ತಿರುವಾಗಲೇ ಪಿರಿಯಡ್ ಆಗಿ ಬಿಟ್ಟಿತು!
ಅದು ಹೇಗೋ ಒಂದು ಗೂಡಂಗಡಿ ಹುಡುಕಿ ಸಾನಿಟರಿ ಪ್ಯಾಡ್ ಕೊಂಡು ದುಡ್ಡು ಕೊಡುತ್ತಿರುವಾಗಲೇ ಮೇಲಿನಿಂದ ಫೋನ್ ಬಂತು....
" Active ಆಗಿದ್ದೀರಾ...? ಒಂದೂ ಆಗಿಲ್ಲಾ.... "
ಅಲ್ಲೇ ಬೀಡಿ ಸೇದುತ್ತಿದ್ದವರು ಮಾತಾಡಿಕೊಳ್ಳುತ್ತಿದ್ದರು.
" ಎಷ್ಟು ಸಿಗುತ್ತಂತೆ...!?"
" ಓ...... "
" ಅದಿಕ್ಕೇಯಾ.... "
ನೋಟಿಸಿಗಿಂತ ಚುಚ್ಚು ಮಾತು ಹೆಚ್ಚು ಅವಮಾನಕರ!
ಭಯ ಬಿತ್ತುವುದು, ಓಲೈಕೆ ಮಾಡುವುದು, ಕೊಳ್ಳೆ ಹೊಡೆಯುವುದು...ಈ ನೆಲ ಇಷ್ಟು ಕರಪ್ಟ್ ಆಗಬಾರದಿತ್ತು!
ReplyDelete