Posts

Showing posts from May, 2014

ಎಲ್ಲಾ ಮುಗಿದ ಮೇಲೆ ,,,

Image
ನೀನು ಮಲಗಿಯಾದ ಮೇಲೆ   ನಾನು ಎಚ್ಚರಗೊಂಡೆ,  ನಿನ್ನ ಕನಸಿನ ಆಳದಾಳಕ್ಕೂ  ನನ್ನ ಹೃದಯ ಈಜಾಡುತ್ತಿತ್ತು ..  ನೀನು ಹೊದ್ದ ಹೊದಿಕೆಯ ತುಂಬಾ   ನನಗರಿವಿತ್ತು,  ನಿನ್ನ ಅದುರುವಿಕೆಯಿಂದ  ನನಗಿದರ ಅರಿವಾಯಿತು ,.  ನೀನು ಬಲ್ಲೆಯಾ?!  ನಾನು ಯಾರು !?  ಶತ ಶತಮಾನಗಳಿಗೂ ಲೆಕ್ಕ ಸಿಗಲಿಲ್ಲ   ಐನ್ ಸ್ಟಿನ್ ಡಾರ್ವಿನ್ ಸಾಕ್ರೆಟಿಸ್ ರಿಗೂ  ಹುಚ್ಚು ಹೊಳೆಯಲಿಲ್ಲ  ಪೆರುವಿನ ಗಿರಿಗಳ ತುತ್ತತುದಿಯ ಆಳದಲ್ಲೂ ...  ಈಜಿಪ್ಟಿನ ಪಿರಮಿಡ್ ಗಳ  ಗುಪ್ತತೆಯ ಬಯಲಲೂ ,,,  ನೀನಿರಲಿಲ್ಲ ನಾನಿದ್ದೆ ,.?!  ಭಯವಾಗಿ  ಭಕ್ತಿಯಾಗಿ  ಶಕ್ತಿಯಾಗಿ    ಈಗಲೂ ಇದ್ದೇನೆ - ನಿರ್ಜೀವ ಧರ್ಮಗಳಲ್ಲಿ ಕೈಲಾಗದ ಮೂರ್ತಿಗಳಲ್ಲಿ. ನನಗೆ ಭಯವಿದೆ -  ನನ್ನ ವ್ಯಾಲಿಡಿಟಿಯ ಬಗ್ಗೆ  ಸಂಚುಹೂಡುವ  ಭೂಗತ ಬಿಗ್ ಬ್ಯಾಂಗ್ ಗಳ ಬಗ್ಗೆ    ಅಂತರಿಕ್ಷದ ಆಳಅಗಲ ಬಗೆವ    ಬೇಟೆನಾಯಿ ಉಪಗ್ರಹಗಳ ಬಗ್ಗೆ .,.  ವ್ಯಾಪಾರ ಕಡಿಮೆಯಾದರೇನಂತೆ  ಮುಂದೇನಾದೀತೋ  ಕಾದುನೋಡಬೇಕು ,.,                - ಜಾನ್ ಸುಂಟಿಕೊಪ್ಪ.

ಮುಗಿದ ಮೇಲೆ

ಕಣ್ಣ ಮುಚ್ಚಿ ಮಲಗಿದೆ ಭೂತಗಳು ಸರಿದಾಡುತ್ತಿದ್ದವು ಗಾಬ್ರಿಯಲ್ ಮಾರ್ಕೆಜ್ ನ ಅಜ್ಜಿ ಹೇಳಿದ ಕತೆಯಂತೆ, ಮನದ ಅಂಗಳದಲಿ ಸದ್ದಿಲ್ಲದೆ ಕೋಲ ಕುಣಿಯುತ್ತಿದ್ದವು,.. ಹೌದು ,.. ಈ ಅಪಧಮನಿ - ಅಭಿಧಮನಿ ಕೋಟಿಗಟ್ಟಲೆ ಲೋಮನಾಳಗಳಲ್ಲೆಲ್ಲಾ ಅಡಗಿ ಕುಳಿತೆ, ನನಗೆ ಆ ದೆವ್ವದ ಕಂಗಳ ನೀರವ ಕತ್ತಲ ಭಯವಿತ್ತು !! ಈಗ ಕಣ್ಣು ತೆರೆದಿದ್ದೇನೆ ಪರಿಚಿತ -ಅಪರಿಚಿತರೆಂಬ ದೆವ್ವಗಳ ಮುಂದೆಯೇ ನಾನು ಸರಿದಾಡುತ್ತಿದ್ದೇನೆ- ಮತ್ತು ನನ್ನ ಕಂಗಳಲೂ ನೀರವ ಕತ್ತಲಿದೆ,..         - ಜಾನ್ ಸುಂಟಿಕೊಪ್ಪ .