Posts

Showing posts from October, 2015

ಒಂದು ಸ್ವಗತ

Image
ನಾನು ಮತ್ತೆ ಹೊರಡಬೇಕಿದೆ…. ಈ ಊರು ಕೇರಿ ದೇಶ ಬಿಟ್ಟು ದೂರ ಹೊರಡಬೇಕಿದೆ; ಕತ್ತಲು ಕವಿದ ಈ ರಾತ್ರಿ ನಿದ್ದೆಯಿಲ್ಲದೆ ಕಳೆಯಬೇಕಿದೆ ಕರುಣೆಯಿಲ್ಲದ ಕಣ್ಣೀರು ಬಸಿದು ಇಂದೇ ಉಸಿರಾಡಬೇಕಿದೆ ನಾನು ಮತ್ತೆ ಹೊರಡಬೇಕಿದೆ; ಮೊನ್ನೆ ಸುರಿದ ಮಳೆಯ ತಂಪು ಒದ್ದೆ ಇಳೆಯ ಮಣ್ಣ ಕಂಪು ಜೀವದ ಜೀವ ಪ್ರೀತಿಯ ಬಿಂಬ ಅವಳ ಒಡಲಲಿ ಬೆಚ್ಚನಿರುವಾಗ ಎಲ್ಲಾ ಬಿಟ್ಟು ಹೊರಡಬೇಕಿದೆ ನಾನು ಮತ್ತೆ ಹೊರಡಬೇಕಿದೆ; ಇಳೆಯನು ತಬ್ಬಿದ ಕತ್ತಲಿನಲ್ಲಿ ಹೃದಯವ ಬಿರಿವ ನೋವಿನಲ್ಲಿ ಆಗಸವೆಲ್ಲಾ ತಡಕಾಡುತಿರಲು ಬೆಳಕು ಬೀರಿ ಹಾರುವ ವಿಮಾನ ನಾಳೆ ನಾನೂ ಹಾರಬೇಕಿದೆ ಸುಡುವ ಮರಳಲಿ ನರಳಿ ನರಳಿ ಮಮತೆ-ಪ್ರೀತಿ ಪಕ್ಕಕ್ಕೆಸೆದು ದಿನಾರಿಗಾಗಿ ಬಾಳಬೇಕಿದೆ ನಾಳೆ ಮತ್ತೆ ಹೊರಡಬೇಕಿದೆ; ಬಾಡಿದ ಅವಳ ಮೊಗವ ಕಂಡು ಬರಸೆಳೆಯಬೇಕಿದೆ, ಬಿಸಿಬಿಸಿ ಕಣ್ಣೀರನೊರೆಸಿ ಒಂದು ಸವಿಮುತ್ತ ನೀಡಬೇಕಿದೆ ನಾನು,.. ನೋವ ಮರೆತು ನಗಬೇಕಿದೆ ಮತ್ತೆ ಹೊರಡಬೇಕಿದೆ; ಭಾವನೆಗಳಿರದ ಟಿಕ್ ಟಿಕ್ ಮುಳ್ಳು ಕರುಣೆಯಿಲ್ಲದೆ ನರಳುತಿರಲು ಕಾಲನ ಕರೆಗೆ ಹೆಜ್ಜೆಯನಿರಿಸಿ ಸುಮ್ಮಗೆ ನಡೆಯಬೇಕಿದೆ ನಾನು ಮತ್ತೆ ನಡೆಯಬೇಕಿದೆ.. ಕೊಂಕಣಿ ಮೂಲ: ಸುನೀಲ್ ಕ್ರಾಸ್ತಾ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ .

ಗಿರಾಕಿ

Image
ಹೂ ಕೊಳ್ಳುವವನ ಕಂಗಳಲಿ ಇಬ್ಬನಿ ತಬ್ಬಿದ ಘಾಟಿ ರಸ್ತೆಯ ಮಬ್ಬು; ಕಣ್ಣಂಚಲಿ ಜಿನುಗಿದ ಕಣ್ಣೀರು ಬೆರಳಂಚನು ಸುಡುವ ಮುನ್ನ ತಣ್ಣನೆ ಜಾರಿ ಗುಲಾಬಿಗಳ ಮುತ್ತಿತು; ನನಗಿದು ಹೊಸತಲ್ಲ, ಯಾವಾಗಲೂ ಹೂಗಳ ಆರ್ದ್ರಗೊಳಿಸುವವರೇ- ಕೆಲವೊಮ್ಮೆ ಹೃದಯ ಮಿಡಿದು ಕೆಲವೊಮ್ಮೆ ಹೃದಯ ಬಿರಿದು; "ಎಷ್ಟು ಬೇಕಾಗಬಹುದು?" ಸಾಂತ್ವಾನಿಸುವ ದನಿಯಲ್ಲಿ ಉಸುರಿದೆ "ಈ ಕಂಗಳು ಸಾಕ್ಷಾತ್ಕರಿಸಿದ ಪ್ರತಿ ಹಲ್ಲೆಗಳಿಗೂ ಸಾಕಾಗುವಷ್ಟು!" ಉತ್ತರ ಬಂತು,,, ಹೂಗಳ ಕಂಪಿನ ನಡುವೆಯೂ ಕಂಪಿಸುವ ಅವನ ಚಪ್ಪಲಿಗಳಿಗಂಟಿದ ಹೊಲಸು ನನ್ನ ಮೂಗನ್ನು ತೀವ್ರವಾಗಿ ಕೊಲ್ಲಲಾರಂಭಿಸಿತು,,. ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ ಕನ್ನಡಕ್ಕೆ :ಜಾನ್ ಸುಂಟಿಕೊಪ್ಪ .

*** ತರ್ಪಣ ***

ಅಲ್ಲೊಂದು ಹಕ್ಕಿ ಕೂಗುತ್ತಿದೆ ಹಡ್ಲುಬಿದ್ದ ಗದ್ದೆ ಸೋಮಾರಿತನ ಹೊದ್ದು ಮಲಗಿದೆ; ಏರಿ ಬದಿಯ ನಳ್ಳಿ ಬಿಲಗಳು ವಸಾಹತು ಕಳಕೊಂಡಾಗಿದೆ ಆ ಬಿಲದಗಲಕ್ಕೂ ಹಕ್ಕಿ ಹಾಡಿನ ಮಾರ್ದನಿ- ಒಂಟಿ ರಾಗವ ಕೇಳುವವರಿಲ್ಲ ಹರಿವ ತೋಡಿನ ಪರಾಕ್ರಮವಿಲ್ಲ ಗಾಳಿಗೆ ಓಲಾಡುವ ಕೆಸುಗಳಷ್ಟೇ ಕೂಮೆ,ಬೈನೆ,ತಡಚಿಲಗಳೆಲ್ಲಾ ಮರೆತು ಹೋಗಿವೆ,,, ಅಂದಚೆಂದದ ಮೂಲಿಕೆಗಳಿಗೆಲ್ಲಾ ನೀಟಾದ ಕ್ಷೌರ! ಶಿಸ್ತಿನ ಸಾಲಲ್ಲಿ ನಿಂತ ಸಿಲ್ವರ್ ಮರಗಳು ಕಾಂಡದ ತಿರುಳಲ್ಲಿ ನೋಟನ್ನು ಹುದುಗಿಸುತ್ತಿವೆ,,. ರೊಚ್ಚಿಗೆದ್ದು ಪೊಗದಸ್ತಾಗಿ ಬೆಳೆವ ಕಾಫಿಗಿಡಗಳು ಕಾಡಿನ ನಾಶದ ಪಣತೊಟ್ಟಿವೆ ತೊಯ್ದಾಡುವ ಅಂತರಾಷ್ಟ್ರೀಯ ಮಾರುಕಟ್ಟೆ ಸುರಿವ ಎನ್.ಪಿ.ಕೆ.ಗಳ ಹೆಚ್ಚಿಸಿವೆ ದಟ್ಟವಾದ ಕಾಫಿತೋಟಗಳಲೂ ಗವ್ವೆನ್ನುವ ಮೌನ! ಕೃತಕ ಹಸಿರಿನ ಸಾಮ್ರಾಜ್ಯದಲಿ ಬರೇ ಹಣದ ಧ್ಯಾನ,, ಮೌನ ಹೊದ್ದ ನೆಲವೇ ಒಮ್ಮೆ ಮೈ ಕೊಡವಿ ನಿಲ್ಲು ಹುಚ್ಚು ಮನುಜನ ಸತ್ತ ನೋಟುಗಳ ಕಲಸಿ ಭೂಗತಗೊಳಿಸು,,, ಭೂಮಿ ಭೂಕಂಪನಕೆ ಉತ್ತು ಹದವಾಗಲಿ ಅಲ್ಲೆಲ್ಲೂ ಮನುಷ್ಯನ ಹೆಜ್ಜೆಗುರುತುಗಳು ಕಾಣದಾಗಲಿ,,, ಚಿಗುರುವ ಹಸಿರು ನೆಮ್ಮದಿಯ ಉಸಿರು ಚೆಲ್ಲಲಿ,,, - ಜಾನ್ ಸುಂಟಿಕೊಪ್ಪ.