Posts

Showing posts from May, 2017
Image
ಅವ್ವ ಅವ್ವ ... ಚರಿತ್ರೆಯ ಪುಟವಾಗಿದ್ದಾಳೆ ; ನಾನು ಮಾತ್ರ ಚಪ್ಪಲಿ ಬಿಚ್ಚಿಟ್ಟು ಮುದುರಿಕೊಳ್ಳುತ್ತೇನೆ, ಮಣ್ಣ ಕಣಕಣವೂ ಅವ್ವನ ಒಡಲಾದಾಗ ಹಾಗೇ ಸುಮ್ಮಗೆ ಬಿದ್ದುಕೊಳ್ಳುತ್ತೇನೆ; ಅವ್ವ ಯಾವ ಮಣ್ಣಲ್ಲಿ ಮಣ್ಣಾದಳೋ, ಯಾವ ದಾಹಕ್ಕೆ ಬಲಿಯಾದಳೋ, ಎಲ್ಲೆಂದು ಹುಡುಕಲಿ!? ಅವ್ವಳ ಒಡಲಿನಲ್ಲಿದ್ದ ಅಷ್ಟೂ ದಿನಗಳು ನನ್ನ ಕಾಡುತ್ತಿವೆ, ಹಸಿವಿನ- ಬೆವರಿನ ನಿಟ್ಟುಸಿರುಗಳು ಬುಸಬುಸ ಬಿಡುತ್ತಿದ್ದ ಆ ಏದುಸಿರುಗಳು ತೆವಲಿಗಾಗಿ-ಸುಖಕ್ಕಾಗಿ ಅಡವಿಟ್ಟ ಆ ಸದ್ದಿಲ್ಲದ ಚೀತ್ಕಾರಗಳೂ ಗರ್ಭದೊಳಗೆ ಕೇಳಿಲ್ಲವೆಂದುಕೊಂಡೆಯಾ!? ಅವ್ವ... ಈ ಚರಿತ್ರೆ ಯಾರಿಗೆ ಬೇಕು ಹೇಳು? ಒಡಲಿನಿಂದ ಮಡಿಲಿಗೆ ಮಡಿಲಿನಿಂದ ತೋಳತೆಕ್ಕೆಗೆ ಆಮೇಲೆ ಪೊಡವಿಗೆ ಜಾರಿಜಾರಿ ಚರಿತ್ರೆಯ ಪುಟವಾಗುವುದು ಸದಾ ಇದ್ದದ್ದೇ... ಥೂ...ಹಾಳು ಜಗತ್ತು ಗೊಗ್ಗ ಬರದಿದ್ದರಷ್ಟೇ ಸಾಕು ಸುಮ್ಮಗೇ ಮುದುರಿಕೊಳ್ಳುತ್ತೇನೆ.. ಸುಮ್ಮಗೇ ಬಿದ್ದುಕೊಳ್ಳುತ್ತೇನೆ... ಜಾನ್ ಸುಂಟಿಕೊಪ್ಪ.