Posts

Showing posts from January, 2016

***** ಕವಿತೆಯಾಗುವುದೆಂದರೇನು!?*****

ಕವಿತೆಯಾಗುವುದೆಂದರೇನು!? ಕಾಲನೆತ್ತಿ ಉಚ್ಚೆ ಹೊಯ್ಯಲು ಬಂದ ಬೀದಿ ನಾಯಿಗೆ ಲೈಟುಗಂಬವೊಂದು ಕೇಳಿತು,... ಕತ್ತಲೊಳಗಿನ ಬೆಳಕನ್ನು ಬೆಳಕಿನೊಳಗಿನ ಕತ್ತಲನ್ನೂ ಕಂಡು ಊಳಿಡುವುದೇ ಕವಿತೆಯೆಂದಿತು ನಾಯಿ ಲೈಟುಗಂಬಕ್ಕೂ ನಿಜವೆನ್ನಿಸಿತೇನೋ,,, ಅಷ್ಟಕ್ಕೇ ಕರೆಂಟು ಹೋಗಿ ಕತ್ತಲಿಗೂ ಬೆಳಕಿಗೂ ಕಾದಾಟವಾಗಿ ಬೀದಿಯುದ್ದಕ್ಕೂ ಊಳಿಡುವಿಕೆ ಕವಿತೆಯಾಯಿತು,,... ಕವಿತೆಯಾಗುವುದೆಂದರೇನು!? ಪರಪರ ಕೆರೆದುಕೊಳ್ಳುತ್ತಾ ಕಾಲನೆಳೆದು ನಡೆಯುತ್ತಿದ್ದ ಹುಚ್ಚನಿಗೆ ರಸ್ತೆಯೊಂದು ಕೇಳಿತು,,, ಮಾತಿನೊಳಗಿನ ಅರ್ಥವನ್ನು ಅರ್ಥದೊಳಗಿನ ಮಾತನ್ನೂ ಕಂಡು ಗಲಗಲ ನಕ್ಕು ಅಳುವುದೇ ಕವಿತೆಯೆಂದ ರಸ್ತೆಗೂ ನಿಜವೆನ್ನಿಸಿತೇನೋ... ಅಷ್ಟಕ್ಕೇ 'ಅದು-ಇದು' ತಿನ್ನುವವರ ನಡುವೆ ಗಲಭೆಯಾಗಿ ಮಾತಿಗೂ ಅರ್ಥಕ್ಕೂ ಕಾದಾಟವಾಗಿ ರಸ್ತೆಯುದ್ದಕ್ಕೂ ನಗು-ಅಳು ಕವಿತೆಯಾಯಿತು,,., ಇದೀಗ,... ಲೈಟುಗಂಬಕ್ಕೂ ರಸ್ತೆಗೂ ವಾಗ್ವಾದವಾಗಿ ಕವಿತೆಯ ಕೊಲೆಯಾಗಿದೆ,,,, - ಜಾನ್ ಸುಂಟಿಕೊಪ್ಪ.

*****ಅಪ್ಪಾ*****

ವಾತ್ಸಲ್ಯದ ಕಣಿವೆಯ ತುಂಬಾ ಕಾನೆಳೆದುಕೊಂಡು ಹುಡುಕುತ್ತಿರುವೆ ಹತ್ತಿ - ಇಳಿವ ಪಡಿಪಾಟಲು ಕಂಡು ಕಲ್ಲು ಮುಳ್ಳುಗಳು ನಕ್ಕಿವೆ; ಕಿತ್ತು ಬಂದ ಹೃದಯ ತೊಟ್ಟಿಕ್ಕುವ ನೆತ್ತರು ಹೆಜ್ಜೆಗುರುತುಗಳ ಕೆಂಪಾಗಿಸಿದೆ,. ದುಃಖದ ಉಮ್ಮಳಿಕೆ ಮಾರ್ದನಿಸಿದೆ ಕಣಿವೆಯ ಹೆಬ್ಬಂಡೆಗೂ ಕೂಡಾ ಜಿನುಗುವ ಕಣ್ಣೀರು ,... ಅಪ್ಪಾ ನೀನೆಲ್ಲಿರುವೆ?! ನಿನ್ನ ಮಣ್ಣಾಗಿಸಿದ ಮಣ್ಣು ನಿರ್ಲಿಪ್ತ,..... ಚಿಗುರಿದ ಹಸುರಿನಲೊಂದು ಹೂಮೊಗ್ಗ ನಸುನಗು,,, ಸೊಂಯ್ಯನೆ ಬೀಸುವ ಸುಳಿಗಾಳಿಗೆ ನಿನ್ನ ಬೊಗಸೆಯಷ್ಟು ಬಿಸುಪು,,, ಕನಸು-ಮನಸು-ಗಂಟಲು ಬಿಗಿದು ಎಲ್ಲೆಲ್ಲೂ ಮೌನ,,,, ಇರಲಿ... ಹೀಗೇ ಇರಲಿ, ಅಪ್ಪನೆಂಬ ಅಪ್ಪನ ಪ್ರೀತಿ ಹೀಗೆಯೇ ಇರಲಿ,,,, ಇಲ್ಲವಾದರೆ ಒಮ್ಮೆ ನಾನು ಸತ್ತು ಹೋದೇನು,,. ನಿನ್ನ ಪ್ರೇಮದ ಸವಿನೆನಪುಗಳ ಮರೆತು ಬಿಟ್ಟೇನು.... ಮರೆತು ಬಿಟ್ಟೇನು,... - ಜಾನ್ ಸುಂಟಿಕೊಪ್ಪ.

***** ಗಾಯದ ಹೂಗಳು ಮತ್ತು ನನ್ನ ಪಾಡಿಗೆ ನಾನು*****

Image
ಸಮಕಾಲೀನ ಕನ್ನಡ ಕಾವ್ಯಜಗತ್ತು ಗಾಯದ ಹೂಗಳನ್ನು ಪ್ರೀತಿಯಿಂದ ನೇವರಿಸಿದ್ದೇ ನನ್ನಲ್ಲೊಂದು ರೋಮಾಂಚನವಾಯಿತು.ಬಹುಶಃ ಕಾಜೂರರ ಕವಿತೆಗಳ ರುಚಿ ಹತ್ತಿಸಿಕೊಂಡ ಪ್ರತಿಯೊಬ್ಬರಿಗೂ ಈ ಸಂಚಲನವಾಗಿರಬಹುದೇನೋ,..   ಅಪರೂಪದ ಮಾತು,ಅದರಲ್ಲಿರುವ ಅಗಾಧ ಆಪ್ತತೆ ಮತ್ತು ಸದಾ ಕಾಡುವ ಅವರ ಮುಗ್ಧತೆ,,,. ಕಾಜೂರರ ಬಗ್ಗೆ ಬರೆದಷ್ಟೂ ಸಾಲದು.ಕಾಲೇಜ್ ಮೇಟಾಗಿ,ಒಂದೇ ಸಂಸ್ಥೆಯಲ್ಲಿ ದುಡಿದು ನಂತರ ಇದೀಗ ಒಂದೇ ಇಲಾಖೆಯಲ್ಲಿ ದುಡಿಯುತ್ತಿದ್ದರೂ ಓರ್ವ ಶಿಕ್ಷಕನಾಗಿ,ಕವಿಯಾಗಿ ಗುರುತಿಸಿದಕ್ಕಿಂತ ಒಬ್ಬ ಜೀವದ ಗೆಳೆಯನಾಗಿ ನನ್ನ ಹೃದಯದಲ್ಲಿ ಸದಾ ಬೆಚ್ಚಗಿರುವುದು ನಿಜಕ್ಕೂ ನನಗೆ ಹೆಮ್ಮೆಯ ವಿಷಯ.ಕಾಜೂರರ ಕಾವ್ಯಲಹರಿಯನ್ನು ಆಸ್ವಾದಿಸುವಲ್ಲಿ ಈ ಲೇಖನ ನಿಮ್ಮನ್ನು ಪ್ರೇರೇಪಿಸಿದಲ್ಲಿ ಅದು ನನ್ನ ಪಾಲಿನ ಸೌಭಾಗ್ಯ.     " ಎದೆ ಸೀಳಿ        ತಲೆ ಸೀಳಿ        ಚರಿತ್ರೆ ಸೀಳಿ        ತೋರಿಸುವುದೆಲ್ಲ ಕಷ್ಟದ ಕೆಲಸ,,." ಎಂದು ಹಾಡಿಕೊಳ್ಳುವ ಸತೀಶ್ ಬಹಳಷ್ಟು ಸಹೃದಯರಿಗೆ ಒಂದು ವಿಸ್ಮಯ,ನಿಗೂಢ ಪ್ರಶ್ನೆ,,,,,ಒಬ್ಬ ಜೆನ್ ಗುರುವಿನಂತೆ,ಪ್ರವಾದಿಯಂತೆ ತನ್ನಷ್ಟಕ್ಕೆ ಹಾಡಿಕೊಳ್ಳುವ ಸತೀಶ್ ಬೆಳಕಿನೊಂದಿಗೆ ಕತ್ತಲನ್ನೂ ಪ್ರೀತಿಸುವವರು,ನಲಿವಿನಂತೆಯೇ ನೋವನ್ನೂ ಬಾಚಿ ತಬ್ಬಿಕೊಂಡಿರುವವರು.ಅದಕ್ಕೇನೋ ಅವರ ಗಾಯಗಳು ಹೂವಾಗಿ ಆಮೇಲೆ ಕವಿತೆಗಳಾಗಿ ನಮ್ಮನ್ನು ಈ ಪರಿಯಾಗಿ ಕಾಡುತ್ತಿರುವುದೇನೋ,,,       'ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳುಗಳು

****** ಸಮ್ಮಿಲನ ******

Image
ತನ್ನಷ್ಟಕ್ಕೇ ಹಾಡಿಕೊಳ್ಳುವ ಝರಿ,ಒಂದು ಚೂರೂ ತೂಕಡಿಸದೆ ನಿದ್ರಿಸುತ್ತಿರುವ ಆ ದೈತ್ಯಾಕಾರದ ಬೆಟ್ಟಗುಡ್ಡಗಳು,ಒಳಗೂ-ಹೊರಗೂ ನಿಗೂಢತೆಯನ್ನು ಹೊದ್ದುಕೊಂಡು ಸುಮ್ಮಗೇ ನಿಂತಿರುವ ನಾಲ್ಕುನಾಡು ಅರಮನೆ,ಸದ್ದಿಲ್ಲದೆ ಬಿದ್ದುಕೊಂಡ ಕಾಫಿತೋಟಗಳು ನನ್ನ ಶಾಲೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.ಶಾಲೆಯಿಂದ ಹೊರಬರುವ ಹೆಣ್ಣುಗಂಡುಗಳೆಂಬ ಪ್ರಾಣಿಗಳು ಯಂತ್ರಗಳಾಗಿ ರೂಪಾಯಿಯ ಅಮಲಿನಲ್ಲಿ ತೂರಾಡಿ ಈ ಹಸಿರನ್ನು ಕ್ರಮೇಣ ಇಲ್ಲವಾಗಿಸುತ್ತವೆ ಎಂದಷ್ಟೇ ಅವು ಬಲ್ಲವು,,, ವೀಕೆಂಡುಗಳ ಮೋಜುಮಸ್ತಿಗಾಗಿ ಕೂಡಿಟ್ಟಿದ್ದನ್ನೇ ಕರಗಿಸಲಿಕ್ಕಾಗಿ ಬಣ್ಣಬಣ್ಣದ ಕಾರುಗಳಲ್ಲಿ ತೇಲಿಬರುವವರು,ತಮ್ಮ ಬೆತ್ತಲುತನವನ್ನು ಸಾರಿಸಾರಿ ಹೇಳುವವರು,ಮಾನವೀಯತೆ-ಶಿಸ್ತು-ಸಂಸ್ಕೃತಿಯನ್ನು ರಮ್ಮು ವಿಸ್ಕಿ ಬಿಯರಿನ ಟಿನ್ನುಗಳಲ್ಲೇ ಆವಾಹಿಸಿಕೊಳ್ಳುವವರು ನಮ್ಮ ಶಾಲೆಯನ್ನು 'ಕಾರ್ ಪಾರ್ಕಿಂಗ್' ಎಂದಷ್ಟೇ ತಿಳಿದಿದ್ದಾರೆ,,, ಮೊನ್ನೆಮೊನ್ನೆ ನಡುಗುವ ಚಳಿಯಲ್ಲಿ ಮೂಡಿಬಂದ ಕ್ರಿಸ್ಮಸ್ ವೀಕೆಂಡ್ ನಮಗೆ ಮರೆಯಲಾಗದ ದಿನ.ಮಕಾಡೆ ಬಿದ್ದುಕೊಂಡಿರುವ ನಮ್ಮ ಶಾಲೆಯ ಮೈದಾನದಲ್ಲಿ ರಂಗೋರಂಗು...ಅದ್ಯಾವ್ಯಾವ ಊರುಗಳ ಕಾರುಗಳು ತೇಲಿ ಬಂದಿದ್ದವೋ ಕಾಣೆ,ಆದರೆ ಬೆಂಗಳೂರಿನಿಂದ ತೇಲಿಬಂದ ಬಿಳಿಯ ಕಾರೊಂದು ನಮಗೆಲ್ಲರಿಗೂ ಬೆಚ್ಚಗಿನ ಪ್ರೀತಿಯನ್ನೇ ಹರಿಸಿತು. ಯು.ಎಸ್.ಎ ನಲ್ಲಿ ದುಡಿದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಶ್ರೀ ಗುರುಪ್ರಸಾದ್ ಹಾಗೂ ಶ್ರೀಮತಿ ಪೂರ್ಣಿಮಾ ರವರು