Posts

Showing posts from April, 2017
* ಎಲ್ಲಾರಂತಲ್ಲ ನನ್ನ ಹಸುಗೂಸು * ಎಲ್ಲಾರಂತಲ್ಲ ನನ್ನ ಹಸುಗೂಸು ಅಳುವುದೇ ಇಲ್ಲ! ಸದ್ದು ಮಾಡದೇ ಮಲಗಿದ್ದಾಳೆ ಸಮಾಧಿಯೊಳಗೆ; ಎಲ್ಲಾರಂತಲ್ಲ ನನ್ನ ಹಸುಗೂಸು ಕಣ್ಣು ಬಿಡಲೇ ಇಲ್ಲ! ಕ್ರೂರ ಜಗತ್ತು ಕಾಣುವ ಮೊದಲೇ ಅರ್ಥ ಮಾಡಿಕೊಂಡು ಬಿಟ್ಟಳು; ಎಲ್ಲಾರಂತಲ್ಲ ನನ್ನ ಹಸುಗೂಸು ಜೋಳಿಗೆ ತೊಟ್ಟಿಲು ಇಲ್ಲವೇ ಇಲ್ಲ ಭೂಮಿತಾಯ ಮಡಿಲೇ ಬೆಚ್ಚವಂತೆ ನೋಡಿ,... ಸದ್ದಿಲ್ಲ! ಎಲ್ಲರಂತಲ್ಲ ನನ್ನ ಹಸುಗೂಸು ಸಾವಿನೊಂದಿಗೇ ಹೋರಾಡಿ ತಾಯಿಗೆ ಜನ್ಮ ನೀಡಿದ್ದಾಳೆ; ಎಲ್ಲರಂತಲ್ಲ ನನ್ನ ಹಸುಗೂಸು ಮಡಿಲು ಏರಿ ಕತೆಹೇಳಿ ಮಲಗಿಸೆಂದು ಸತಾಯಿಸುವ ದೊಡ್ಡವಳಂತೆ ಅಲ್ಲವೇ ಅಲ್ಲ! ಸುಡುಗಾಡಿನ ಸಮಾಧಿಗಳ ಪಿಸುಗುಟ್ಟುವ ಕತೆಗಳಿಗೇ ತಲೆದೂಗುತ್ತಾಳೆ; ಎಲ್ಲರಂತಲ್ಲ ನನ್ನ ಮುದ್ದು ಹಸುಗೂಸು ನಿರ್ಜನ ಬೀದಿಯುದ್ದಕ್ಕೂ ಬೊಗಳಿ ಊಳಿಡುವ ನಾಯಿ ನರಿಗಳೇ ದಯವಿಟ್ಟು ಸುಮ್ಮಗಾಗಿ- ಎಲ್ಲರಂತಲ್ಲ ನನ್ನ ಹಸುಗೂಸು! ಜಾನ್ ಸುಂಟಿಕೊಪ್ಪ.
ದುಃಖವೆಂದರೆ, ಹೀಗೇ.... ನವಮಾಸಗಳ ಕನಸು-ನಿರೀಕ್ಷೆಗಳನ್ನು ಬಿಳಿಯುಡುಪಿನಲ್ಲಿ ಗಂಟುಕಟ್ಟುವುದು ಮತ್ತೆ... ಗುಂಡಿ ತೋಡಿ ಮಣ್ಣುಮುಚ್ಚಿ ಮುಗುಮ್ಮಾಗಿ ಬಿಕ್ಕಿಬಿಕ್ಕಿ ಅಳುವುದು; ನಾನೇನೂ ಅಬ್ರಹಾಮನಲ್ಲವಲ್ಲಾ, ಅದಕ್ಕೋ ಏನೋ ಬಲಿಯರ್ಪಣೆ ಆಗಿಯೇ ಹೋಯಿತು! ಎರಡು ಮಾತ್ರೆ ತನ್ನಿ ಎಂದು ಚೀಟಿ ಬರೆದು ಕೊಟ್ಟರು... ಅದೇಕೆಂದು ಕೇಳಿದೆ ನಿರ್ಭಾವುಕರಾಗಿ ಬಿಡಿಸಿ ಬಿಡಿಸಿ ಹೇಳಿದರು ಅರ್ಥವಾಯಿತು ಬಿಡಿ ಅಂದುಕೊಂಡೆ- ಅಮೃತವನ್ನು ಬತ್ತಿಸುವುದು ಎಷ್ಟೊಂದು ಸುಲಭ; ತಂಗಿಪಾಪು ಬೇಕು ತಂಗಿಪಾಪು ಬೇಕೆಂದು ಸದಾ ಹಾತೊರೆಯುತ್ತಿದ್ದ ಮಗಳು ಇಂದು ವಾರ್ಡಿಗೆ ಓಡೋಡಿ ಬಂದಳು. ಕಂಡಕಂಡ ಹಾಸಿಗೆಗಳಿಗೆ ಓಡೋಡಿ ಬಗ್ಗಿ ಇಣುಕಿ ಹುಡುಕಿದಳು, ಬೇಸತ್ತು ಕಡೇಗೆ ತುಟಿ ಕಚ್ಚಿ ಹೇಳಿದೆ- 'ತಂಗಿಪಾಪು ದೇವರ ಬಳಿಯಿದೆ ಮಗಳೇ' ಮಗಳಿಗೀಗ ಮುನಿಸು- ದೇವರ ಮೇಲೋ !? ತಂಗಿಯ ಮೇಲೋ ?! ಕೇಳುವ ಧೈರ್ಯ ನನಗಿಲ್ಲ; * ಎಲ್ಲಾ ತಲೆ ಬಿಸಿ ನಡುವೆ ನನ್ನ ಚಪ್ಪಲಿ ಕಾಣೆಯಾಯಿತು! ಹಿರಿಯರಿಗೆಲ್ಲಾ ಸಮಾಧಾನ, 'ಹೋಗಲಿ ಬಿಡು ಶನಿ ತೊಲಗಿತು' ನನಗೆ ಮಾತ್ರ ಅರ್ಥವಾಗುತ್ತಿಲ್ಲ- ಅಷ್ಟಕ್ಕೂ ಶನಿ ಯಾವುದು?! - ಜಾನ್ ಸುಂಟಿಕೊಪ್ಪ.