Posts

Showing posts from 2015

***** ಸತ್ಯ *****

ಒಂದು ರಾತ್ರಿ ಗಲಭೆಯಾದ ಬೀದಿಗಳಲ್ಲಿ ಭಾರವಾದ ಹೆಜ್ಜೆಯೊಂದಿಗೆ ಗೊಣಗಿದೆ, 'ಯಾವುದು ಸತ್ಯ ? ' ಬೀದಿಯೊಂದು ನರಳಿತು, 'ದೇಶಪ್ರೇಮವೇ ಸತ್ಯ!' ಸತ್ಯಾಸತ್ಯತೆಯ ಪರಾಮರ್ಶೆಗೂ ಮುನ್ನ ಗಲ್ಲಿಯೊಂದು ಅರಚಿತು, 'ಧರ್ಮಾಂಧತೆಯೇ ಸತ್ಯ!' ಬೀದಿಬೀದಿಗಳ ವಾಗ್ವಾದಕ್ಕೆ ಹೆದರಿ ನಾನು ಓಡಲಾರಂಭಿಸಿದೆ... ಬಸವಳಿದು ಕಡೆಗೊಮ್ಮೆ ನಿಂತಾಗ ಕತ್ತಲೆಯ ಕಂಬಳಿ ಹೊದ್ದ ಆ ಟಾರು ರಸ್ತೆ ಬಿಕ್ಕುತ್ತಾ ಹೇಳಿತು, 'ಸತ್ಯವೆಂದರೆ ಕಾಣದ ಕೈ...!?' - ಜಾನ್ ಸುಂಟಿಕೊಪ್ಪ.

ನೀನು ಹೋದ ರಾತ್ರಿ

ನೀನು ಹೋದ ರಾತ್ರಿ ಆ ಬಾಗಿಲು ತೆರೆದೇ ಇತ್ತು... ಹೃದಯದ ಆಳದಾಳಕ್ಕೂ ಇಳಿದ ಕೆಂಪು ಬೇರುಗಳು ತಮ್ಮಷ್ಟಕ್ಕೇ ಇರಿದುಕೊಳ್ಳುತ್ತಿದ್ದವು; ಹೊದ್ದುಕೊಂಡಷ್ಟೂ ಮಲಗದ ಈ ಕಣ್ರೆಪ್ಪೆಗಳಿಗೂ ಗಲ್ಲ ಜಾರುವ ಬಿಸಿ ಕಂಬನಿಯೆಡೆ ಗೂಢಚರ್ಯ... ನೀನು ಹೋದ ರಾತ್ರಿಯಲಿ ನಿಜಕ್ಕೂ ಬೆಳದಿಂಗಳಿಲ್ಲ, ಅದೇನಿದ್ದರೂ ಆ ಕೂಸ ಕಣ್ಣೊಳಗೆ ಹುಡುಕಬೇಕಷ್ಟೇ.., ನೀನು ಹೋದ ರಾತ್ರಿ ಕೆಂಪಿಗೂ- ಬಿಳುಪಿಗೂ ಸಂಧಾನ ಸಭೆ, ಅವೆರಡೂ ಸೇರಿ ನಡೆದೂ ನಡೆದೂ ಇದೀಗ ಎಲ್ಲೆಲ್ಲೂ ಕಪ್ಪು ಕತ್ತಲು... ನಿಜ ನಿಜ.. ನೀನು ಹೋದ ರಾತ್ರಿ ಆ ಬಾಗಿಲು ತೆರೆದೇ ಇತ್ತು.. ಬಂದೂಕಿನ ನಳಿಕೆಗಳು ಕೊಂಚವಷ್ಟೇ ಇಣುಕಿತು, ಲಾಂಗು ಮಚ್ಚುಗಳಿಗೆ ಕೊಂಚವಷ್ಟೇ ಬಾಯಾರಿತು.. ಶ್... ಮಣ್ಣ ಹೊದ್ದು ಮಲಗಿದೆ ಕೂಸು ಎಚ್ಚರ...ಎಚ್ಚರ... - ಜಾನ್ ಸುಂಟಿಕೊಪ್ಪ.

ಅದು-ಇದು

ಊರೂರಿಗೆ ತಲೆನೋವಾದ 'ಅದು' ತಿನ್ನುವ ಜನಗಳೇ ಓಡುವುದ ಕೊಂಚ ನಿಲ್ಲಿಸಿ, ಉಪ್ಪು-ಖಾರ-ಮಸಾಲೆಯಾಗಲು ನಾನೂ ಸಿದ್ಧ; ಊರೂರಿನ ಅಟ್ಟಹಾಸವಾದ 'ಇದು' ತಿನ್ನುವ ಜನಗಳೇ ಬಾಕು,ಕತ್ತಿ ಲಾಂಗುಗಳ ಚೂಪಾಗಿಸಿ, ಕೊಚ್ಚಿ ಕೊಚ್ಚಿ ಕೊಯ್ಯಿಸಿಕೊಳ್ಳಲು ಈ ದೇಹವೂ ಬದ್ದ; ಊರೂರಿನ ನೆತ್ತರು ಚಪ್ಪರಿಸುವ ಜನಗಳೇ ಕಾಲೆಳೆದು ಓಡೋ ನೆಮ್ಮದಿಯನ್ನಿಡಿಯಿರಿ ನೆತ್ತರ ಕಲೆಗೆ ಹೆದರಿ ಬೇಸತ್ತು ಮಂಗಳ ಗ್ರಹಕ್ಕೇ ನೆಗೆದು ಬಿಟ್ಟೀತು,,, 'ಅದು-ಇದು'ತಿನ್ನಲು ನಾವು ನೀವೇ ಇಲ್ಲವಾದೀತು.... - ಜಾನ್ ಸುಂಟಿಕೊಪ್ಪ.

ಅವ್ವ

Image
ನನ್ನ ಅವ್ವ ಸುಟ್ಟ ರೊಟ್ಟಿಗಳೆಲ್ಲಾ ಇದೀಗ ನೆತ್ತರಾಗಿದೆ, ಆ ನೆತ್ತರು ನರನಾಡಿಗಳಲ್ಲೆಲ್ಲಾ ಹರಿದು ಈ ದೇಹ ಪುಷ್ಪರಾಗ; ಸೀದು ಹೋದ ಅವ್ವನ ಕನಸುಗಳೆಲ್ಲಾ ನನ್ನ ಬದುಕಿನಲಿ ನಳನಳಿಸುತ್ತಿವೆ, ಆ ಕನಸುಗಳು ನನ್ನ ಬದುಕ ಅರಳಿಸಿ ಈ ಜೀವನ ಸಂತೃಪ್ತ; ಸೋತು ಹೋದ ಆ ಸುಕ್ಕುಗಳೆಲ್ಲಾ ಅವ್ವನ ಬೆವರ ಹನಿಗಳ ನೆನಪುಗಳು, ಇಂಗಿ ಹೋದ ಕಣ್ಣೀರು ಮೊಳಕೆಯೊಡೆದು ಕಣ್ಣ ತುಂಬಾ ಕಾಂತಿ; ಅವ್ವಾ,,, ನೀನಿದೋ ಹಣ್ಣೆಲೆಯಾದೆ, ದೂರದ ಗಾಳಿ ಸಮೀಪಿಸುತ್ತಿದೆ ನಿನ್ನನ್ನು-ನನ್ನನ್ನೂ; - ಜಾನ್ ಸುಂಟಿಕೊಪ್ಪ.

ಒಂದು ಸ್ವಗತ

Image
ನಾನು ಮತ್ತೆ ಹೊರಡಬೇಕಿದೆ…. ಈ ಊರು ಕೇರಿ ದೇಶ ಬಿಟ್ಟು ದೂರ ಹೊರಡಬೇಕಿದೆ; ಕತ್ತಲು ಕವಿದ ಈ ರಾತ್ರಿ ನಿದ್ದೆಯಿಲ್ಲದೆ ಕಳೆಯಬೇಕಿದೆ ಕರುಣೆಯಿಲ್ಲದ ಕಣ್ಣೀರು ಬಸಿದು ಇಂದೇ ಉಸಿರಾಡಬೇಕಿದೆ ನಾನು ಮತ್ತೆ ಹೊರಡಬೇಕಿದೆ; ಮೊನ್ನೆ ಸುರಿದ ಮಳೆಯ ತಂಪು ಒದ್ದೆ ಇಳೆಯ ಮಣ್ಣ ಕಂಪು ಜೀವದ ಜೀವ ಪ್ರೀತಿಯ ಬಿಂಬ ಅವಳ ಒಡಲಲಿ ಬೆಚ್ಚನಿರುವಾಗ ಎಲ್ಲಾ ಬಿಟ್ಟು ಹೊರಡಬೇಕಿದೆ ನಾನು ಮತ್ತೆ ಹೊರಡಬೇಕಿದೆ; ಇಳೆಯನು ತಬ್ಬಿದ ಕತ್ತಲಿನಲ್ಲಿ ಹೃದಯವ ಬಿರಿವ ನೋವಿನಲ್ಲಿ ಆಗಸವೆಲ್ಲಾ ತಡಕಾಡುತಿರಲು ಬೆಳಕು ಬೀರಿ ಹಾರುವ ವಿಮಾನ ನಾಳೆ ನಾನೂ ಹಾರಬೇಕಿದೆ ಸುಡುವ ಮರಳಲಿ ನರಳಿ ನರಳಿ ಮಮತೆ-ಪ್ರೀತಿ ಪಕ್ಕಕ್ಕೆಸೆದು ದಿನಾರಿಗಾಗಿ ಬಾಳಬೇಕಿದೆ ನಾಳೆ ಮತ್ತೆ ಹೊರಡಬೇಕಿದೆ; ಬಾಡಿದ ಅವಳ ಮೊಗವ ಕಂಡು ಬರಸೆಳೆಯಬೇಕಿದೆ, ಬಿಸಿಬಿಸಿ ಕಣ್ಣೀರನೊರೆಸಿ ಒಂದು ಸವಿಮುತ್ತ ನೀಡಬೇಕಿದೆ ನಾನು,.. ನೋವ ಮರೆತು ನಗಬೇಕಿದೆ ಮತ್ತೆ ಹೊರಡಬೇಕಿದೆ; ಭಾವನೆಗಳಿರದ ಟಿಕ್ ಟಿಕ್ ಮುಳ್ಳು ಕರುಣೆಯಿಲ್ಲದೆ ನರಳುತಿರಲು ಕಾಲನ ಕರೆಗೆ ಹೆಜ್ಜೆಯನಿರಿಸಿ ಸುಮ್ಮಗೆ ನಡೆಯಬೇಕಿದೆ ನಾನು ಮತ್ತೆ ನಡೆಯಬೇಕಿದೆ.. ಕೊಂಕಣಿ ಮೂಲ: ಸುನೀಲ್ ಕ್ರಾಸ್ತಾ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ .

ಗಿರಾಕಿ

Image
ಹೂ ಕೊಳ್ಳುವವನ ಕಂಗಳಲಿ ಇಬ್ಬನಿ ತಬ್ಬಿದ ಘಾಟಿ ರಸ್ತೆಯ ಮಬ್ಬು; ಕಣ್ಣಂಚಲಿ ಜಿನುಗಿದ ಕಣ್ಣೀರು ಬೆರಳಂಚನು ಸುಡುವ ಮುನ್ನ ತಣ್ಣನೆ ಜಾರಿ ಗುಲಾಬಿಗಳ ಮುತ್ತಿತು; ನನಗಿದು ಹೊಸತಲ್ಲ, ಯಾವಾಗಲೂ ಹೂಗಳ ಆರ್ದ್ರಗೊಳಿಸುವವರೇ- ಕೆಲವೊಮ್ಮೆ ಹೃದಯ ಮಿಡಿದು ಕೆಲವೊಮ್ಮೆ ಹೃದಯ ಬಿರಿದು; "ಎಷ್ಟು ಬೇಕಾಗಬಹುದು?" ಸಾಂತ್ವಾನಿಸುವ ದನಿಯಲ್ಲಿ ಉಸುರಿದೆ "ಈ ಕಂಗಳು ಸಾಕ್ಷಾತ್ಕರಿಸಿದ ಪ್ರತಿ ಹಲ್ಲೆಗಳಿಗೂ ಸಾಕಾಗುವಷ್ಟು!" ಉತ್ತರ ಬಂತು,,, ಹೂಗಳ ಕಂಪಿನ ನಡುವೆಯೂ ಕಂಪಿಸುವ ಅವನ ಚಪ್ಪಲಿಗಳಿಗಂಟಿದ ಹೊಲಸು ನನ್ನ ಮೂಗನ್ನು ತೀವ್ರವಾಗಿ ಕೊಲ್ಲಲಾರಂಭಿಸಿತು,,. ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ ಕನ್ನಡಕ್ಕೆ :ಜಾನ್ ಸುಂಟಿಕೊಪ್ಪ .

*** ತರ್ಪಣ ***

ಅಲ್ಲೊಂದು ಹಕ್ಕಿ ಕೂಗುತ್ತಿದೆ ಹಡ್ಲುಬಿದ್ದ ಗದ್ದೆ ಸೋಮಾರಿತನ ಹೊದ್ದು ಮಲಗಿದೆ; ಏರಿ ಬದಿಯ ನಳ್ಳಿ ಬಿಲಗಳು ವಸಾಹತು ಕಳಕೊಂಡಾಗಿದೆ ಆ ಬಿಲದಗಲಕ್ಕೂ ಹಕ್ಕಿ ಹಾಡಿನ ಮಾರ್ದನಿ- ಒಂಟಿ ರಾಗವ ಕೇಳುವವರಿಲ್ಲ ಹರಿವ ತೋಡಿನ ಪರಾಕ್ರಮವಿಲ್ಲ ಗಾಳಿಗೆ ಓಲಾಡುವ ಕೆಸುಗಳಷ್ಟೇ ಕೂಮೆ,ಬೈನೆ,ತಡಚಿಲಗಳೆಲ್ಲಾ ಮರೆತು ಹೋಗಿವೆ,,, ಅಂದಚೆಂದದ ಮೂಲಿಕೆಗಳಿಗೆಲ್ಲಾ ನೀಟಾದ ಕ್ಷೌರ! ಶಿಸ್ತಿನ ಸಾಲಲ್ಲಿ ನಿಂತ ಸಿಲ್ವರ್ ಮರಗಳು ಕಾಂಡದ ತಿರುಳಲ್ಲಿ ನೋಟನ್ನು ಹುದುಗಿಸುತ್ತಿವೆ,,. ರೊಚ್ಚಿಗೆದ್ದು ಪೊಗದಸ್ತಾಗಿ ಬೆಳೆವ ಕಾಫಿಗಿಡಗಳು ಕಾಡಿನ ನಾಶದ ಪಣತೊಟ್ಟಿವೆ ತೊಯ್ದಾಡುವ ಅಂತರಾಷ್ಟ್ರೀಯ ಮಾರುಕಟ್ಟೆ ಸುರಿವ ಎನ್.ಪಿ.ಕೆ.ಗಳ ಹೆಚ್ಚಿಸಿವೆ ದಟ್ಟವಾದ ಕಾಫಿತೋಟಗಳಲೂ ಗವ್ವೆನ್ನುವ ಮೌನ! ಕೃತಕ ಹಸಿರಿನ ಸಾಮ್ರಾಜ್ಯದಲಿ ಬರೇ ಹಣದ ಧ್ಯಾನ,, ಮೌನ ಹೊದ್ದ ನೆಲವೇ ಒಮ್ಮೆ ಮೈ ಕೊಡವಿ ನಿಲ್ಲು ಹುಚ್ಚು ಮನುಜನ ಸತ್ತ ನೋಟುಗಳ ಕಲಸಿ ಭೂಗತಗೊಳಿಸು,,, ಭೂಮಿ ಭೂಕಂಪನಕೆ ಉತ್ತು ಹದವಾಗಲಿ ಅಲ್ಲೆಲ್ಲೂ ಮನುಷ್ಯನ ಹೆಜ್ಜೆಗುರುತುಗಳು ಕಾಣದಾಗಲಿ,,, ಚಿಗುರುವ ಹಸಿರು ನೆಮ್ಮದಿಯ ಉಸಿರು ಚೆಲ್ಲಲಿ,,, - ಜಾನ್ ಸುಂಟಿಕೊಪ್ಪ.

**** ಎಲ್ಲಾ ಸರಿಯಾಗಿದೆ ****

Image
ದೇವಾಲಯದ ನಂದಾದೀಪ ಇನ್ನೂ ಉರಿಯುತ್ತಿದೆ; ನಿರಪರಾಧಿ-ನಿರ್ಗತಿಕರ ದೇಹ- ನೆತ್ತರು ಇಂಧನವಾಗಿ ಭಗ್ಗೆಂದು ಹೊತ್ತಿ ಉರಿದು ಕಂದಮ್ಮಗಳ ಸವಿಗನಸುಗಳು ಯಜ್ನಕುಂಡವಾಗಿವೆ, ಕರ್ರ್ರಗಿನ ಹೊಗೆ ಪಿಸುಗುಟ್ಟುತ್ತದೆ- ಎಲ್ಲಾ ಸರಿಯಾಗಿದೆ; ಯಾರಿಗೆ ಏನೂ ಅನ್ನಿಸುವುದಿಲ್ಲ, ಕಪಟ ವಿಶ್ವಾಸದಲ್ಲಿ ಬೆಂದುಬೆಂದು ಅಂತಃಕರಣದೊಂದಿಗೆ ಮಾನವೀಯತೆ ಆವಿಯಾಗಿ ಲೀನವಾಗಿ ಮಾಯವಾದರೂ ಎಲ್ಲಾ ಸರಿಯಾಗಿದೆ; ಆರಾಧನೆಯ ಮುಖವಾಡದ ಹಿಂದಡಗಿದ ನೋವು-ಅವಮಾನಗಳೆಲ್ಲಾ ಸಿಡಿದು ಚೂರುಚೂರಾಗಿ ಬಂಡಾಯದ ಬೀಜಗಳಾದರೂ ಸದ್ದಿಲ್ಲದೆ ಗುಡಿಸಿ ಗುಡ್ಡೆಹಾಕಿ ಬೂದಿಯೂ ಕಾಣದಂತಾಗಿಸಿ ಏದುಸಿರೊಂದು ಕೂಗಿಕೂಗಿ ಹೇಳುತ್ತದೆ ಹೌದು..ಎಲ್ಲಾ ಸರಿಯಾಗಿದೆ; ಜಪಸರದ ಮಣಿಗಳೆಲ್ಲಾ ಎಣಿಸಿ ಎಣಿಸಿ ಸವೆದು ಬಗಲಲ್ಲಿನ ಚಾಕುಚೂರಿಗಳೆಲ್ಲಾ ಹರಿತಗೊಂಡು ನೆತ್ತರನ್ನು ನೆಕ್ಕಿನೆಕ್ಕಿ ಸೀಳಿದ ನಾಲಗೆ ತಣ್ಣಗೆ ಸರಿದಾಡಿ ನಿಟ್ಟುಸಿರಾಗುತ್ತದೆ, ಹೌದು,,, ಮೇಲೊಬ್ಬನಿದ್ದಾನೆ,,, ಎಲ್ಲಾ ಸರಿಯಾಗಿದೆ,,, ಆದದ್ದೆಲ್ಲಾ ಒಳ್ಳೆಯದೇ ಆಗಬೇಕಾಗಿರುವುದೂ ಒಳ್ಳೆಯದೇ ನಿಜನಿಜ,,, ಎಲ್ಲಾ ಸರಿಯಾಗಿದೆ,,, ಅನುವಾದ: ಜಾನ್ ಸುಂಟಿಕೊಪ್ಪ ಕೊಂಕಣಿ ಮೂಲ:ದಿನೇಶ್ ಕೊರಿಯ

ಒಂದು ಹನಿ ನೆತ್ತರು

Image
ಒಂದು ಹನಿ ನೆತ್ತರು ಇಗೋ ಮೈ ಚಾಚಿ ಮಲಗಿದೆ; ಯಾವ ಕನಸುಗಳು ಕತ್ತ ಕೊಯ್ದುಕೊಂಡವೋ ಕಾಣೆ., ಪಾಪ.. ಚಿಲ್ಲನೆ ಚಿಮ್ಮಿದೆ, ಛೇ.. ನಾನು ನೋಡಬಾರದಿತ್ತು; ನೆತ್ತರ ಕಳೆದುಕೊಂಡ ಆತ್ಮ ಏದುಸಿರು ಬಿಡುತ್ತಿದೆ., ಬಹುಶಃ ನೆತ್ತರ ಕೋಶ ಕೋಶದಲೂ ಕೊಲೆಗಟುಕನ ನೆರಳಿರಬೇಕು; ಕುಕ್ಕರುಗಾಲಲ್ಲಿ ಕುಳಿತ ನಾನು ಬಗ್ಗಿ ಬಗ್ಗಿ ದಿಟ್ಟಿಸಿ ನೋಡುತ್ತೇನೆ, ಇರುವೆಯೊಂದು ದಿಕ್ಕಾಪಾಲಾಗಿ ಓಡುತ್ತಿದೆ, ಕೋಣೆಯ ಗೋಡೆ ಗೋಡೆಯಲೂ ಪ್ರತಿಧ್ವನಿ- “ಕಾಪಾಡಿ,,. ಕಾಪಾಡಿ,..” ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್ ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ

ಸಂಘರ್ಷ

Image
ಸಂಘರ್ಷ 1 ಇಗರ್ಜಿಯ ಹೊಸ್ತಿಲ ಬಳಿ ಚಪ್ಪಲಿಗಳೆರಡು ಏದುಸಿರು ಬಿಡುತ್ತಿವೆ; ಗದ್ದೆ ದಾಟಿ ಏರಿ ಮೀರಿ ಗುಡ್ಡ ಹತ್ತಿ ಮಣ್ಣು ಮೆತ್ತಿಕೊಂಡ ಚಪ್ಪಲಿಗಳು ತಮ್ಮ ಪಾಪಗಳಿಗಾಗಿ ಬಿಕ್ಕಿ ಬಿಕ್ಕಿ ಅಳುತ್ತಿವೆ- ಇಗರ್ಜಿಯ ಮೊದಲ ಘಂಟೆ ಇನ್ನು ಸದ್ದುಗೈಯ್ಯಬೇಕಷ್ಟೇ.,,. 2 ರೊಂಯ್ಯನೆ ಬಂದ ಕಾರಿಗೆ ಎದ್ದ ಧೂಳು ಆ ಪಾದರಿಯ ಪ್ರಭೋದನೆಯ ಮಂತ್ರಮುಗ್ಧತೆಗೇ ಮಂಕು ಬಡಿಸುತ್ತದೆ, ಬೆಳ್ಳಗಿನ ಕಾರಿನಿಂದಿಳಿದ ಕರಿ ಬೂಟುಗಳು ಮಣ್ಣು ಮೆತ್ತಿದ ಚಪ್ಪಲಿಗಳ ಎದೆಯ ಮೆಟ್ಟಿ ವಿರಮಿಸುತ್ತವೆ; 3 “ಮೊದಲಿಗರೆಲ್ಲಾ ಕಡೆಯವರಾಗುವರು ಕಟ್ಟಕಡೆಯವರೂ ಮೊದಲಿಗರಾಗುವರು” ಪಾದರಿ ಉಲಿದ ಏಸುವಿನ ಮಾತು ಮಣ್ಣು ಮೆತ್ತಿದ ಚಪ್ಪಲಿಗಳ ಕತ್ತ ಹಿಸುಕಿ ಕಂಗಾಲಾಗಿಸುವುದು.., ಆ ನರಳುವಿಕೆಯಿಂದ ಅರಳಿದ ಕರ್ರ್ರಗಿನ ಬೂಟುಗಳು ಮಿರಮಿರ ಮಿಂಚುವವು… ಕೊಂಕಣಿ ಮೂಲ: ಆಂಡ್ರ್ಯೂ ಎಲ್ ಡಿಕುನ್ನ ಅನುವಾದ: ಜಾನ್ ಸುಂಟಿಕೊಪ್ಪ.

*****ಕನವರಿಕೆ*****

Image
ಗೆಳೆಯಾ,,, ಕರ್ರ್ರಗಿನ ಶವಸಂಪುಟದಲಿ ತಣ್ಣನೆ ನೀನು ಮಲಗಿದೆ; ಉಮ್ಮಳಿಸುವ ದುಃಖವೂ ತಕರಾರಿಲ್ಲದೆ ಸಂಪುಟದ ಬಾಗಿಲ ಮುಚ್ಚಿತು, ಚಿಲಕ ಬಡಿಯಿತು,,, ಮಣ್ಣ ಆಳಕ್ಕೆ ಸುಮ್ಮಗೆ ಮಲಗಿದೆ ನೀನು ಮಣ್ಣಲಿ ಮಣ್ಣಾಗಿ,,, ಆ ಮಣ್ಣ ಕಂಪಲಿ ನಿನ್ನ ತಂಪಿದೆ; ನಿಜ,, ಆದರೆ,,, ನೀನಿಲ್ಲದ ಈ ನರಳಿಕೆ ತಕರಾರು ತುಂಬಿದ ಈ ಜಗತ್ತೆಂಬ ಶವಸಂಪುಟ ಕನಸೆಂಬಂತೆ ಬೆತ್ತಲಾಗಿದೆ,, ನನ್ನ ದಿರಿಸು-ತೊಗಲುಗಳ ಒಳಹೊರಗೆಲ್ಲಾ ಸತ್ತ ವಾಸನೆಯಿದೆ.,. ಗೆಳೆಯಾ,,, ಇನ್ನೆಷ್ಟು ದಿನ ಕಾಲ ಕಾಯಲಿ- ಮಣ್ಣಾಗಲು- ಕಂಪಾಗಲು-ತಂಪಾಗಲು - ಜಾನ್ ಸುಂಟಿಕೊಪ್ಪ.

ತಲೆದಿಂಬು

Image
ತಲೆದಿಂಬು ಕೈ ಬೀಸಿ ಕರೆಯುತ್ತಿದೆ, ಒಂದು ಹಿಡಿ ಸಾಂತ್ವಾನವಾಗಿ... ಕಟ್ಟೆಯೊಡೆದ ದುಃಖ ಧುಮ್ಮಿಕ್ಕುವುದು ತಲೆದಿಂಬಿನಲ್ಲೇ ಬೆಳಗಾದಾಗ ಕಣ್ಣು ಕೆಂಪಗಾಗುವುದಷ್ಟೇ; ಕಾಮವಿಲ್ಲದ ಪ್ರೇಮ- ಪ್ರೇಮವಿಲ್ಲದ ಕಾಮ ತಲೆದಿಂಬಿನ ಉಬ್ಬರವಿಳಿತಗಳು; ಎಂದೂ ಬಾರದ ಅಪ್ಪ ಬರೆಯಲಾಗದ ಕವಿತೆ ಬೆಚ್ಚಗೆ ತಬ್ಬಿಕೊಳ್ಳುವುದು ಸವಿಮಾತಾಗಿ; ಹುಟ್ಟು- ಸಾವಿನ ಚೆಕ್ ಪೋಸ್ಟಿನ ಆಸುಪಾಸಿನಲೆಲ್ಲಾ ಸುಳಿದಾಡಲು ತಲೆದಿಂಬೇ ರಹದಾರಿ; ದಿಂಬಿನ ಮೆದುವಿನಲ್ಲೇನಿದೆ ಸೊಗಸು ಹಗಲು-ರಾತ್ರಿಯ ಕೊಯ್ದಾಟವಿರುವಾಗ ತುಣುಕು ನಿದ್ದೆಯ ಹಂಗಿರುವಾಗ,.. ನಾನೂ ಕಾಯುತಿರುವೆ ಈಗೀಗ- ಹುಡಿಮಣ್ಣ ತಲೆದಿಂಬಾಗಿಸಲು ಎಂದೂ ಕಾಣದ ಕನಸ ನನಸಾಗಿಸಲು..            - ಜಾನ್ ಸುಂಟಿಕೊಪ್ಪ.

ದೇಶಾಂತರ

Image
ಎಡಿನ್ಬರ್ಗಿನ ಶೀತಮಾರುತವೊಂದು ಮಲೆನಾಡಿಗೇರಿದೆ; ಕಣ್ಣು ಹಾಯಿಸಿದಷ್ಟೂ ಕಡಲ ತಡಿಯ ಹಚ್ಚ ಹಸುರು, ಹೆಜ್ಜೆ ಇರಿಸಿದಷ್ಟೂ ಮತ್ತದೇ ಒದ್ದೆ ಮರಳು; ಮಿನುಗುವ ಕಡಲ ನೀರು ನೀನು ನೀಲಿಯೋ ?! ಹಸುರೋ ?! ನನಗಾಷ್ಚರ್ಯ,.. ನನ್ನ ತೊಗಲೀಗ ಬೆಳ್ಳಗಾಗಿದೆ , ದೊಗಳೆ ಅಂಗಿಯ ಒಳಹೊರಗೆಲ್ಲಾ ಅದೇ ವೀರ್ಯದ ಅಮಲು ; ಶಿರಾಡಿ ಘಾಟಿಯ ತಿರುವುಗಳಲೆಲ್ಲಾ ಹರಿವ ಟ್ವೀಡ್ ಥೇಮ್ಸಿನ ಚೆಲುವು, ಬಂಡೆ ಬಂಡೆಗಳೆಡೆಯಲ್ಲೂ ನಡೆವ ಮುಕ್ತ ಮೈಥುನ ., ಅಗೋ ಅಲ್ಲಿ ಹಾಡುತ್ತಿದೆ ಕುಡಿಯರ ಮುಗ್ಧ ಗುಡಿಸಲು - ಜಾಸ್ ಗಿಟಾರಿನ ಗುನುಗುವಿಕೆಗೆ ಸದ್ದಿಲ್ಲದೆ ನಿಮಿರುತ್ತಿದೆ; ರೆಕ್ಕೆ ಬಡಿದು ಕೂಗು ಹಾಕುವ ಹೂಂಜಕ್ಕೂ ಇದೆ ಅಂತರಾಷ್ಟ್ರೀಯ ಕಾಲಮಾನದ ಸಂಶಯ,.. ಹರಿದ ಚಾದರದೊಳಗಿನ ಆ ಬಿಸುಪು ಕನಸುಗಳು ನನ್ನತನವನ್ನು ಮುಟ್ಟಿಮುಟ್ಟಿ ನೋಡುತ್ತಿವೆ.. ಎದೆಯೊಳಗಿನ ದಾಹಕ್ಕೆ ಅಟ್ಲಾಂಟಿಕ್ ನ ಅಲೆಗಳನ್ನು ಬರಿದಾಗಿಸುತ್ತೇನೆ.. ಆಗಸದಲಿ ಹೊಳೆವ ಚಂದ್ರ ನಕ್ಕು ಸುಮ್ಮಗಾಗುತ್ತಾನೆ .,.                  - ಜಾನ್ ಸುಂಟಿಕೊಪ್ಪ.

ಕೋಣೆ

ಇಗೋ... ಬದುಕಿನ ಕೋಣೆಯೊಳಗೆ ವಸ್ತುಗಳು ಬದಲಾಗುತ್ತಿಲ್ಲ ., ಹಸಿದ ಕಿಟಕಿಗಳ ದಾಹಕ್ಕೆ ಕಣ್ಣ ತಂಪಾಗಿಸಲು ಪ್ರಯತ್ನಿಸುತ್ತೇನೆ ಆದರೆ ಚಿಲಕಗಳ ಸದ್ದು ಇನ್ನೂ ಬದಲಾಗಿಲ್ಲ,, ಆ ಮೇಜು ಕುರ್ಚಿಯ ಸ಼ಂಬಂಧ ಇನ್ನೂ ಹಾಗೆಯೇ ಇದೆ ಕೆಲವೊಮ್ಮೆ ಹತ್ತಿರ ಕೆಲವೊಮ್ಮೆ ದೂರ,, ಇವುಗಳ ನಡುವೆ ಅಕ್ಷರಗಳ ಸೇತುವೆ ಪೋಣಿಸುತಿರುವೆ,,. ಮತ್ತೆ ಆ ಮಂಚ ಅದಕ್ಕಿನ್ನೂ ಸಾವಿಲ್ಲ?! ವ್ಯಗ್ರಗೊಂಡ ಯೌವನದಲೇ ಕಾಲ ಕಳೆಯುತ್ತಿದೆ,, ಹೊಸ್ತಿಲ ದಾಟಿ ಬರಲು ನಾನೂ ಕಾಯುತಿರುವೆ ಆದರೆ ನನ್ನೊಳಗಿನ ಪುರುಷ ಸಿದ್ಧನಿಲ್ಲ ?! ಬಾಗಿಲ ಬಳಿ ಬಿದ್ದಿರುವ ಆ ಚಪ್ಪಲಿಗಳು ನೆನಪುಗಳ ಭಾರಕ್ಕೆ ಜಗ್ಗಿಹೋಗಿವೆ ಮಣ್ಣು ಮೆತ್ತಿ ಬಣ್ಣಗಳ ಮರೆಸಿವೆ, ಎರಡು ಗೋಡೆಗಳ ನಡುವೆ ಜೋತುಬಿದ್ದ ಹಗ್ಗ ಇನ್ನೂ ಒಳವಸ್ತ್ರಗಳ ಹೊತ್ತಿವೆ, ಅಂತರಂಗದ ಭಾರ ತಾಳದೆ ಕೊಂಚ ಬಾಗಿವೆ.,, ತಣ್ಣಗೆ ತುಕ್ಕು ಹಿಡಿಯುತ್ತಿರುವ ಬಾಗಿಲ ಕೀಲುಗಳಿಗೆ ನಾಚಿಕೆಯೇ ಇಲ್ಲ., ಪದೇ ಪದೇ ನೆನಪಿಸಿಕೊಂಡರೂ ಒಳ ಬಂದವರ ಎಣಿಕೆ ಸಿಗುತ್ತಿಲ್ಲ ಹೊರ ಹೋದವರೆಷ್ಟೋ ,,, ಮತ್ತು ನಾನು ಕೋಣೆ ತುಂಬಿದ ನಗು ಅಳು ಏದುಸಿರುಗಳಲ್ಲಿ ಮುಳುಗಿ ಉಸಿರುಗಟ್ಟುತ್ತಿದ್ದೇನೆ, ಬಹುಶಃ ಹಳಸಿದ ವಾಸನೆ ಕೋಣೆಯ ಹೊರಗೂ ಇದೆ,,,         - ಜಾನ್ ಸುಂಟಿಕೊಪ್ಪ.

ಕೆಂಡದ ಗುಳಿಗೆಗಳು

******1******* ಭಕ್ತರು ಒಬ್ಬೊಬ್ಬರಾಗಿ ಬಂದರು ಮಂಡಿಯೂರಿ ಪಾದರಿಗೆ ಪಾಪಗಳ ಪಟ್ಟಿ ಒಪ್ಪಿಸಿದರು- ಇಗರ್ಜಿ ತುಂಬಾ ಕೊಳೆತ ವಾಸನೆ,,, > > ****** 2***** > > ಶುಭಶುಕ್ರವಾರದ ಸಂಜೆ ನಾನು ಮನೆ ಕಡೆ ನಡೆಯುತ್ತಿದ್ದೆ ನನಗೆ ಯೇಸುವನ್ನು ಶಿಲುಗೇರಿಸಿದ ತ್ತೃಪ್ತಿಯಿತ್ತು.,, > > ***** 3****** > > ಪಾಸ್ಕ ಹಬ್ಬದ ಭಾನುವಾರ ಭಕ್ತರೆಲ್ಲರೂ ಬಾಟಲಿಗೆ ತೀರ್ಥ ತುಂಬಿಸುತ್ತಿದ್ದರು ಹಂಡೆಯಲ್ಲಿದ್ದ ನೀರು ಕೂಗಿತು- "ಇವರನ್ನು ಶಿಲುಬೆಗೇರಿಸಿ ... ಇವರನ್ನು ಶಿಲುಬೆಗೇರಿಸಿ ..."              - ಜಾನ್ ಸುಂಟಿಕೊಪ್ಪ

ಒಂದು ಪ್ರಾರ್ಥನೆ

Image
ಗಡಿ ಗಡಿಗಳ ದಾಟಿ ಬಂದಿದೆ ಪ್ರೇಮ; ಅಕ್ಷರವಾಗಿ, ದನಿಯಾಗಿ, ಕಡೆಗೆ - ಕಾಮವೂ ಆಗಿ; 2ಜಿ 3ಜಿ ಗಳ ನೆಟ್ವರ್ಕಿಗಿಲ್ಲ ಹಾಳಾದ ಗಡಿಗಳ ಹ಼ಂಗು .., ಆಳವರಿಯದ ಭಾವನೆಗಳು ಸದ್ದಿಲ್ಲದೆ ಮೊಳಕೆಯೊಡೆದಿವೆ; ಬಿಟ್ಟ ಬೇರು ಆಳಕ್ಕಿಳಿದಂತೆ ಹೃದಯವೂ ಬಿರುಕು ಬಿಡುತಿದೆ., ಹೊರಗಿಣುಕುವ ಹಸುರು ಚಿಗುರಲು ತೇಪೆ ಹಚ್ಚುತಿದೆ ಕ್ರೌರ್ಯ ,... ನಡೆ ಮುಂದೆ ನಡೆ ಮುಂದೆ ಹೆಗಲೇರಲಿ ಶವಸಂಪುಟ ,. ಉಸಿರು ಮರೆತ ನಾಗರಿಕತೆ- ಕೊಳೆವ ಮುನ್ನ ಹೆಜ್ಜೆ ಗಳನಿರಿಸಿ ಹೆಜ್ಜೆಯ ಮೇಲೆ ಗಡಿಗಡಿಗಳೂ ನಡೆದು ಬಿಡಲಿ, ಶವಸಂಪುಟದ ಗರ್ಭ - ನವಕೂಸೊಂದನು ಹಡೆಯಲಿ; ಬೆಳಕು ಮಳೆಯಾಗಿ ಕಾಮ ಪ್ರೇಮವಾಗಿ ಆಗಸದುದ್ದಕ್ಕೂ ಸದ್ದಿಲ್ಲದೆ ಮಿನುಗಲಿ ,,.      - ಜಾನ್ ಸುಂಟಿಕೊಪ್ಪ, ಕೊಡಗು.

ಮೆಟ್ರೋ

Image
ಪುರುಸೊತ್ತಿಲ್ಲದ ನಗರ ಮಾನವೀಯತೆಗಾಗಿ ಬಾಯಾರಿದೆ ... ಜೇಬುಗಳ್ಳನ ಕರಾಮತ್ತು ತಲೆಹಿಡುಕನ ಕೈಚಳಕ ಕೆಂಪು ಬೀದಿಯ ಕಾಮದ ವಾಸನೆ - ಆಕಾಶದಲ್ಲಿ ಹದ್ದುಗಳು ಹಾರುತ್ತವೆ... ಗಿರಾಕಿಗೆ ಟೋಪಿಯನ್ನಿಕ್ಕಿದ ವ್ಯಾಪಾರಿ ನೋಟನೆಣಿಸಿ ಗಲ್ಲಾಪೆಟ್ಟಿಗೆಗೆ ಸೇರಿಸುತ್ತಾನೆ ಕಣ್ಣಲ್ಲಿ ಮಿಂಚೋ ... ಸಂಚೋ... ಮಾಂಸದ ಬೀದಿಯಲಿ ಕೋಳಿ ಕುರಿ ದನ ಹಂದಿಗಳು ಬೆತ್ತಲೆ ನೇತಾಡುತ್ತವೆ ... ನೆತ್ತರ ನೆಕ್ಕಲು ಮಚ್ಚಿಗೆ ಹಗಲಾದರೇನು ಇರುಳಾದರೇನು ಟಿ.ವಿ, ಮಿಕ್ಸಿ, ಗಾಡಿಗಳ ಸದ್ದಿಗೆ ಒಳವಸ್ತ್ರ ಹರಿದ ಸದ್ದು ಕೇಳುವುದೇ ಇಲ್ಲ.. ಸೈಜುಗಲ್ಲು ಬಿದ್ದ ತಲೆಯೂ ಕಾಣಸಿಗುವುದು ಇರುವೆ ಮುತ್ತಿದ ಮೇಲೇ... ಅಪರಿಚಿತರೂರಲ್ಲಿ ಸಾವಿನೇಜಂಟನೇನು ಪರಿಚಿತನೇ ?! ಇಂದೋ ನಿನ್ನೆಯೋ ಅವನಿಟ್ಟ ಬಾಂಬು ಸ್ಪೋಟಿಸಿ ಛಿದ್ರಗೊಳಿಸುತ್ತವೆ ಕನಸುಗಳನ್ನು ಟಿ.ವಿ. , ಪೇಪರ್, ಬಾಯಿಮಾತುಗಳೂ ಮಾನವೀಯತೆಯ ಭಾಷಣ ಆರಂಭವಾಗುತ್ತದೆ ನೇರ - ದಿಟ್ಟ - ನಿರಂತರ ಪುಂಖಾನುಪುಂಖ ಜಾಹೀರಾತುಗಳೊಂದಿಗೆ...                           -ಜಾನ್ ಸುಂಟಿಕೊಪ್ಪ ,           

ಎರಡು ಕವಿತೆಗಳು

**** 1 **** ವೇಗವಾಗಿ ತಿರುಗುವ ಫ್ಯಾನಿಗೆ ಇನ್ನೂ ನನ್ನ ಕಾಮದ ಬಿಸಿಯನ್ನು ಆರಿಸಲಾಗುತ್ತಿಲ್ಲ.,, ಆ ಬಿಸಿ ಬೆಳೆದು ದೈತ್ಯನಾಗಿ ಗೋಡೆಗೋಡೆಗಳಿಗೆ ಅಪ್ಪಳಿಸಿದಂತಾಗಿ - ನಾನು ಮಗ್ಗುಲ ಬದಲಿಸಿ ಮಲಗಿದೆ, ಬೀದಿಯುದ್ದಕ್ಕೂ ನಾಯಿ ಬೊಗಳಿದ ಸದ್ದು.... ****** 2 ***** ಅಲ್ಲಾ... ಈ ಕ್ಷಣಿಕ ಬದುಕಿನಲೂ ಕಾಮದ ವಾಸನೆಯೇಕೆ ?! ಸುಡುಗಾಡಿನಲಿ ಬೆಳೆದ ಗಿಡದ ತುಂಬಾ ಹೂ ಹರಡಿವೆ ,.. ಪಕ್ಕದ ಮರದಲ್ಲೆಲ್ಲೋ ಹಕ್ಕಿಗಳ ಕಾಮಕೇಳಿ ನಡೆದಿದೆ,.. ನನಗೂ ಏನೋ ಹೊಳೆದಂತಾಗಿ ಮಣ್ಣ ಹೊದ್ದು ದಿಬ್ಬವಾಗಿ ಸುಮ್ಮಗೆ ಮಲಗಿದೆ - ಯಾರೋ ಪುಣ್ಯಾತ್ಮರು ನೆತ್ತಿಯ ಮೇಲೆ ಶಿಲುಬೆ ನೆಟ್ಟರು...         - ಜಾನ್ ಸುಂಟಿಕೊಪ್ಪ.

ನೇಣು ಕುಣಿಕೆ

ಆ ನೇಣು ಕುಣಿಕೆ ಇನ್ನೂ ಹಾಗೆಯೇ ಇದೆ,., ತಿರುಗುವ ಫ್ಯಾನಿಗೆ ಒಂದು ಪೂರ್ಣ ವಿರಾಮವಿಟ್ಟಂತೆ.,, ಅವರು ಅವಳನ್ನು ಹೊತ್ತು ಹೋಗಿದ್ದಾರೆ ಮತ್ತು ನಾನು ಅವಳೊಂದಿಗೆ ಲೀನವಾಗಿದ್ದೇನೆ ... ಎಡವಿ ಬಿದ್ದ ಕುರ್ಚಿ ಜೋತುಬಿದ್ದ ಹಗ್ಗ ಮತ್ತು ಆ ಕೋಣೆಯ ನೀರವತೆ ನನ್ನ ಲೀನವಾಗಿಸಿದೆ .,. ನಾನು ಲೀನವಾಗಿದ್ದೇನೆ ,,. ಕೋಣೆಯೊಳಗೆ ಇಣುಕುವ ಅವರ ಗುಂಡಿಗೆ ಢವಗುಟ್ಟುತ್ತಿದೆ ಜತೆಗೆ ಕಣ್ಣಂಚಲಿ ನೀರು ಇದ್ದಾಗ ಇಲ್ಲದವರು ಇಲ್ಲವಾದಾಗ ತಡವರಿಸುತ್ತಾರೆ ,,, ನನ್ನಂತೆ ,,, ಆ ನೇಣು ಕುಣಿಕೆ ಇನ್ನೂ ಹಾಗೆಯೇ ಇದೆ ಇರಲಿ ಬಿಡಿ ಪದೇಪದೇ ನನಗೂ ಕೊರಳೊಡ್ಡಬೇಕಿದೆ ,,.

***** ದಾಂಪತ್ಯ*****

Image
ಹೃದಯ ಹೃದಯಗಳ ಸಮ್ಮಿಲನ ಎರಡು ದೇಹ ಒಂದಾಗಿ ಮನಸು ಕರಗಿದೆ, ಇಳೆಯೆಲ್ಲಾ ಇಬ್ಬನಿ ತಬ್ಬಿದ ಅನುಭವ; ಬಿಸುಪಿನ ಆರೋಹಣ-ಅವರೋಹಣ ನಗ್ನತೆಯಲ್ಲಿ ಮಾತ್ರ, ಇರುಳಿನ ಕರುಳೊಳಗೆ ತೊಳಲಾಡಿದಾಗಷ್ಟೇ ಕಾಮಕ್ಕೆ ಕೆಲಸ; ಕೈಗೊಂದು ಕಾಲಿಗೊಂದು ಅಡರುವ ಆ ಕಂದಮ್ಮಗಳ ಮುದ್ದು ಮಾಯೆ ನಾಳಿನ ಅಸಹಾಯಕತೆಯ ಬಂಡವಾಳವಷ್ಟೇ; ಅವನ ಬಿಗಿತವೆಲ್ಲಾ ಕೊಸರಾಟವಾಗಿ ಅವಳ ಚಂಚಲತೆಯೆಲ್ಲಾ ನಿಟ್ಟುಸಿರಾಗಿ ದಾಂಪತ್ಯ ಬದಲಾಗುವುದರಲ್ಲಿ ಸಂಶಯವಿಲ್ಲ; ಕಾಮದ ಸುಳಿಗೆ ಸಿಕ್ಕ ಪ್ರೀತಿ ಮುಳುಗಿ ಏಳಿ ಮುಳುಗಿ ಏಳಿ ಕಡೆಗೊಮ್ಮೆ ಅನಾಥ ಹೆಣವಾಗುತ್ತದೆ; ಇತ್ತ ಅಹಮ್ಮಿನ ಬಸಿರು ಕಟ್ಟಿ ಆ ಬಸಿರು ಬೆಳೆದಂತೆ ಗೋಡೆಗೋಡೆಗಳೆಲ್ಲಾ ಜೈಲುಕಂಬಗಳಾಗಿ ತೆರೆದ ಕಿಟಕಿ ಬಾಗಿಲುಗಳು ಕನಸುಗಳ ಕೈ ಬೀಸಿ ಕರೆಯುತ್ತವೆ; ಮಾತಿನ ಮುತ್ತು ಮುಳ್ಳಾಗಿ ಎದೆಯ ತುಂಬಾ ಗೀರಿದ ಗಾಯವಾಗಿ ಕಣ್ಣೀರು ಕರಗಿ ಇಬ್ಬನಿ ತಬ್ಬಿದ ನೆಲ ಬರಡು ಬರಡು,,,,.. ನನಗೀಗ ಚಿಂತೆ, ತೂತುಗೊಂಡಿರುವುದು ನನ್ನ ಮನೆಯ ದೋಸೆಯೋ ಕಾವಲಿಯೋ....       - ಜಾನ್ ಸುಂಟಿಕೊಪ್ಪ. ಕೊಡಗು.

ಹೂ ಅರಳುವ ಸಮಯ

ಈ ಕೊಸರಾಟಗಳೆಲ್ಲಾ ನಿಟ್ಟುಸಿರಾಗಿ ಬದಲಾಗುವುದರಲ್ಲಿ ಅರ್ಥವಿಲ್ಲ; ಅರ್ಥವಿರುವುದು ಅವಳ ಕಣ್ಣ ಶೂನ್ಯತೆಯಲಿ, ಗೋಡೆಗೋಡೆಗಳಲಿ ಪ್ರತಿಧ್ವನಿಸುವ ಅಹಮ್ಮಿನಲಿ; ನನಗೂ ಆಸೆಯಿದೆ ಉಸಿರಾಡಲು, ಚೆಲುವಿನ ಹೂವಿನ ಅರಳುವಿಕೆಗಾಗಿ ಕಾಯಲು; ಸತ್ತು ಹೋದ ಪ್ರೀತಿಯ ಮುಂದೆ ಬೋರಲು ಬಿದ್ದು ಗೋಳಾಡಬೇಡ,... ಓ ದೇವಾ, ನಿನ್ನದೇ ದಯೆ... ಕಿಟಕಿ ಬಾಗಿಲುಗಳ ತೆರೆದು ಕಾಯುತಿರುವೆ, ನನಗೀಗ ಗೋಡೆಗಳ ಕೆಡವಬೇಕಿದೆ ಬೆಳೆದು ನಿಂತ ಅಹಮ್ಮಿನ ದೈತ್ಯ ಕಿಟಕಿ ಬಾಗಿಲುಗಳಿಂದ ಹೊರಹೋಗಲಾರ.          - ಜಾನ್ ಸುಂಟಿಕೊಪ್ಪ . ಕೊಡಗು.