Posts

Showing posts from February, 2020

ನಾನೇನು ಕೊಂಡೊಯ್ಯಲಿ

  ಇವನದ್ದು ಹೊಸ ಬಂಗಲೆಯಾಯಿತೆಂದು ಅವನು ಹೊಸ ಗಾಡಿ ಕೊಂಡ ಅದಕ್ಕೇ ಮತ್ತೆ.. ನಾನೂ ಆರಂಭಿಸಿದೆ  ಬಾಚಿಕೊಳ್ಳಲು - ತುಂಬಿಸಿಕೊಳ್ಳಲು; ಅವನೊಬ್ಬ ದೇಶ ಸುತ್ತಿದನೆಂದು ಇವನು ವಿದೇಶಕ್ಕೇ ಹಾರಿಬಿಟ್ಟ  ಅದಕ್ಕೇ ಮತ್ತೆ.. ನಾನೂ ಆರಂಭಿಸಿದೆ  ಸುತ್ತಲು - ಮೇಯಲು; ಇವನು ಗೋಡೆಗೆ ಸುಣ್ಣ ಬಿಳಿದನೆಂದು ಅವನು ತಡೆಗೋಡೆಗೂ ಬಣ್ಣ ಬಳಿದುಬಿಟ್ಟ ಅದಕ್ಕೇ ಮತ್ತೆ,.. ನಾನೂ ಆರಂಭಿಸಿದೆ - ಊಸವರಳ್ಳಿಯಂತೆ ಬಣ್ಣ ಬದಲಾಯಿಸಲು; ಅವರು ಮಾಡಿದ್ದೆಲ್ಲ ನನಗೂ ಮಾಡಬೇಕೆನ್ನಿಸುವಾಗ ಅವನು ಸತ್ತ ಇವನೂ ಸತ್ತ ಇದೀಗ ನನ್ನ ಸರದಿ ಆದರೆ,.. ನನಗೀಗ ಚಿಂತೆ ಅವರೆಲ್ಲ ಬಿಟ್ಟೇ ಹೋದರು ನಾನೇನು ಕೊಂಡೊಯ್ಯಲಿ !? ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್ , ಮುಂಬಯಿ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ

ಆಶಾವಾದಿ ಕಿರಣ

ಅರುಣೋದಯದ ಕಿರಣಗಳೊಂದಿಗೆ ಒಂದು ಬೆಳಕಿನ ಕಿರಣ ಆತ್ಮವನ್ನೇ ಸೀಳಿ ಪಿಸುಗುಟ್ಟಿತು -  ಹಿಮ್ಮೆಟ್ಟಬೇಡ... ನಾನೇ.. ಆಶಾವಾದಿ... ಹೊತ್ತೇರುವ ಮುನ್ನವೇ ಒಲೆಯೇರಿದ ಮಡಕೆಯಲಿ ಬೇಯಲು ಅನ್ನವಿಲ್ಲ, ಕುದಿಯುತ್ತಿರುವುದು ಮಾತ್ರ ಬಿಸಿರಕ್ತ; ಬೇಯುತ್ತಿರುವ ತರಕಾರಿಯಲ್ಲೂ ಗುಡಿಸಲ ತುಂಬ ಬೆಂದ ಮಾಂಸದ ಘಮಲು; ಮನದೊಳಗೂ ಮನೆಯೊಳಗೂ ಕಾದಾಟ ತಡೆಯಲಾರದೆ ಅಂಗಳಕ್ಕಿಳಿದರೆ ಅದೇ ಬೆಳಕಿನ ಕಿರಣದ ಆಲಿಂಗನ ಆಡುವ ಕಂದಮ್ಮಗಳದ್ದು ಮಾತ್ರ ಮಾರಾಮಾರಿ ನೆರೆಮನೆಯವನ ಹೋಮ- ಹವನ ವ್ಯರ್ಥ  ನಮ್ಮ ಧರ್ಮಗಳಿಗೇಕೆ ಈ ಗ್ರಹಣ!? ಆ ಕಿರಣ ನನ್ನನ್ನು ಮುನ್ನಡೆಸುತ್ತಿದೆ ಜತೆಗೆ ನೆತ್ತಿ ಸುಡುವ ಬಿಸಿಲು ನೆರೆಯವನ ಕಾಂಪೌಂಡು ಮಾತ್ರ ಸಂಬಂಧಗಳ ಹೂತು ನಿರಾಳವಾಗಿದೆ ಆಶಾವಾದಿ ಕಿರಣ ಪಿಸುಗುಟ್ಟುತ್ತಿದೆ -  ಬದಲಾವಣೆಗೆ ಹಾತೊರೆಯುತ್ತಿರುವೆ... ದಿನದಿನವೂ ಕಾಯುತ್ತಿರುವೆ... ಕೊಂಕಣಿ ಮೂಲ: ಪ್ರಸನ್ನ ನಿಡ್ಡೋಡಿ , ಮುಂಬಯಿ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ

ಅಂತ್ಯಕ್ರಿಸ್ತ

 ಬರಬೇಕಾದವರು ಇವರೇ ಅಂದುಕೊಂಡಿದ್ದೆ ಬಂದವರು ಅವರಲ್ಲ; ಅಂತ್ಯಕಾಲ ಸೂಚ್ಯಕಾಲವೆಂದು ಶತಶತಮಾನಗಳಿಂದ ಮೈಪರಚಿಕೊಂಡದ್ದೇ ಬಂತು  ಗೆತ್ಸೆಮನಿ- ಗೋಲ್ಗೊತ್ತಾ ಎಂದು ಶಿಲುಬೆ ಹೊತ್ತದ್ದೇ ಆಯಿತು ಯುಗಯುಗಾಂತರಕ್ಕೂ ಕಪಟ ಪ್ರವಾದಿಗಳದ್ದೇ ಕಾರುಬಾರು ಬರಬೇಕಾದವರು ಇವರಲ್ಲ; ಅಭಿವೃದ್ಧಿ ಕ್ರಿಸ್ತ ಅಧಿಕಾರ ಕ್ರಿಸ್ತ ಪಾಪಕ್ರಿಸ್ತ ಪುಣ್ಯಕ್ರಿಸ್ತ ಉಘೇ...ಉಘೇ... ಎಂದು ಸಂಭ್ರಮಿಸದಿರಿ ಇವರೇ ಆ ಅಂತ್ಯಕ್ರಿಸ್ತ ! ತಿಂದುಂಡು ತೇಗಿ ಕ್ಯಾಕರಿಸಿ ಉಗಿದು ಮೈಯೆಲ್ಲಾ ಮಾನವಾಗಿ ಕಣ್ಣುಗಳೆಲ್ಲಾ ಕಿವಿಗಳಾಗಿ ಮೌನವೆಲ್ಲಾ ಮಾತಾಗಿಸಿ ಮಾತೆಲ್ಲಾ ನೆಪವಾಗಿಸಿ ಇವರದ್ದು ಅವರಿಗೆ ಅವರದ್ದು ಇವರಿಗೆ ತೇಲಾಡಿಸಿ ಜಾಲಾಡಿಸಿ ಗುಡಿಸಿ ಗುಂಡಾಂತರ ಮಾಡುವವರಿವರು ; ಬರಬೇಕಾದವರು ಯೇಸುಕ್ರಿಸ್ತ ಕ್ಷಮಿಸಿ ... ಬಂದಿರುವುದು ಅಂತ್ಯಕ್ರಿಸ್ತ !                      - ಜಾನ್ ಸುಂಟಿಕೊಪ್ಪ