Posts

Showing posts from 2020

ತಪ್ಪಾಯಿತು ..

ಯಾಕೋ ಹೀಗೆ ಮೈ ಚಾಚಿಕೊಂಡದ್ದು ತಪ್ಪಾಯಿತು.. ತಲೆಯೊಳಗಿನ ಚಿಂತೆಗಳಿಗೆಲ್ಲಾ ದಿಂಬಿನೊಡನೆ ವ್ಯವಹಾರವಾಗಿ ನನ್ನನ್ನು ಆಳದಾಳದ ನಿದ್ರೆಗೆ ದೂಡಲಾರಂಭಿಸಿದವು; ನಾನು ಮರೆಯಬಾರದೆಂದು  ಮತ್ತೆಮತ್ತೆ ಚಪ್ಪರಿಸಿ ನೆನಪಿಸುತ್ತಿದ್ದ ಬಯಕೆಗಳಿಗೆಲ್ಲಾ ಸದ್ದಿಲ್ಲದ ಸ್ವಾತಂತ್ರ್ಯ ; ನನಗೆ ನಾನೇ ಹಗುರವಾಗಿ ಮೋಡವಾಗಿ ತೇಲಿ ತೇಲಿ ಎಲ್ಲಿ ತಲುಪಿದೆನೆಂಬುದೇ ನನಗರಿವಿಲ್ಲ.. ಯಾಕೋ ಹೀಗೆ ಮೈ ಚಾಚಿಕೊಂಡದ್ದು ತೀರಾ ತಪ್ಪಾಯಿತು.. ಸಾವು ಸಹಜವೋ ಅಸಹಜವೋ ತಲೆಕೆಡಿಸಿಕೊಳ್ಳುವಂತಾಗಿದೆ..     - ಜಾನ್ ಸುಂಟಿಕೊಪ್ಪ 

ಒಂದು ನಿಟ್ಟುಸಿರು

ಈಗ  ಏನೂ ಅಲ್ಲದವನಾಗುವುದೆಂದರೆ ಏನರ್ಥ?! ಕತ್ತಲು ಕರಗಿ ಬೆಳಗು ಅರಳಿ ಅಣುರೇಣುತೃಣಕಾಷ್ಟಗಳಲೂ ನಾನು ಕಿರಣವಾಗಿದ್ದೆ ; ಲಜ್ಜೆಯನೇ ಮೈತುಂಬಿಕೊಂಡಾಗ ಬೆತ್ತಲುತನವನು ಹೊದ್ದುಕೊಂಡು ನಿನ್ನೊಳಗೂ ಹೊರಗೂ ಮೇಘವಾಗಿದ್ದೆ,... ಮಳೆಯಾಗಿದ್ದೆ ಮತ್ತೆ   ಈಗ... ಏನೂ ಅಲ್ಲದವನಾಗುವುದೆಂದರೆ.. ಇರಲಿ ಬಿಡು.. ನಿನ್ನೊಳಗಿನ ನನ್ನ ಪಿಸುಮಾತುಗಳೆಲ್ಲಾ  ಮೌನವಾಗಲಿ ಬಿಡು; ಮತ್ತೆ ನಾನು... ?! ಇಲ್ಲವಾಗಿ ಬಿಡುತ್ತೇನೆ ನಿನ್ನೊಳಗೆ ಹೇಗೋ ನನ್ನೊಳಗೂ ಕಾಣೆಯಾಗಿ ಬಿಡುತ್ತೇನೆ  ಹೇಗೂ... ನಾನೂ ಏನೂ ಅಲ್ಲದವನು ;                - ಜಾನ್ ಸುಂಟಿಕೊಪ್ಪ 

ಆಗ ಕತ್ತಲಾಗಿತ್ತು - ಒಂದು ಅನುವಾದಿತ ಕವಿತೆ

*ಆಗ ಕತ್ತಲಾಗಿತ್ತು*            1 ಯೂದ ಎದ್ದು ಹೋದಾಗ ಕತ್ತಲಾಗಿತ್ತು ! ಪ್ರಭುವಿನ ಎದೆಯಂಗಳದಲ್ಲೀಗ ಹುಣ್ಣಿಮೆ         2 ಯೂದ ಬಿಟ್ಟುಹೋದ ದ್ರಾಕ್ಷಾರಸವನ್ನು ಯೇಸು ಕುಡಿದು ಬಿಟ್ಟರು ಅದಕ್ಕೋ ಏನೋ ಯೂದನ ಮುತ್ತು 'ದ್ರೋಹ' ಎಂದೆನ್ನಿಸಲೇ ಇಲ್ಲ!           3 ಸಿಪಾಯಿಗಳೊಂದಿಗೆ ಯೂದ ಬಂದಾಗ ತೋಳಗಳ ಗುಂಪಿನಲ್ಲಿ ಸಿಕ್ಕಿಕೊಂಡ 'ಕುರಿಮರಿ'ಯಂತೆಯೇ ಕಾಣುತ್ತಿದ್ದ... ಕುರಿಗಾಹಿ ಪ್ರಭು ಯೇಸು ಮನ ಮರುಗಿದರು!          4 ಯೂದ ಮುತ್ತಿನ ಮೂಲಕ "ದೇವರ ಕುರಿಮರಿ ಇದೇ" ಎಂದು ತೋರಿಸಿದ... ಬಲಿಪೀಠ ಕುರಿಮರಿಯ ನೆತ್ತರಿಗಾಗಿ ಹಪಹಪಿಸುತ್ತಿತ್ತು!          5 ಕುರಿಮರಿಯೇ ಕುರಿಗಾಹಿಯನ್ನು ಪರಾಧೀನಪಡಿಸಿದಾಗ ಕುರಿಮಂದೆಯ ಗತಿ !? ಪ್ರಭು ಯೇಸು ಮುಂದಿನದ್ದು ಚಿಂತಿಸಿ ರಕ್ತದ ಬೆವರು ಹರಿಸಿದರು!         6 ಯೂದನ ತುಟಿಗಳು ಪವಿತ್ರವಾದ ಪ್ರಭುವಿನ  ಕೆನ್ನೆಯನ್ನು ಸ್ಪರ್ಶಿಸಿದಾಗ ಮಾರುತ್ತರವಿಲ್ಲದೆ ಪ್ರಭು ಬೋಧಿಸಿದ ಪಾಠ- ಪ್ರೀತಿ ಒಂದು ' ಆಯ್ಕೆ ' !        7 ಒಬ್ಬರನ್ನೊಬ್ಬರು  ಆಲಂಗಿಸಿದಾಗ ಇಬ್ಬರೂ ಸಮಾನವಾಗಿ ಬೆವೆತಿದ್ದರು! ಹೃದಯದಲ್ಲಿ ಇಬ್ಬರಿಗೂ ಹರಿತವಾದ ಗಾಯ ! ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ ಕಾರ್ಮೆಲಿತ್ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ

ನೆತ್ತರ ಹನಿಗಳು

Image
ಗುಂಡಿಗೆ ಎದೆಯೊಡ್ಡಲು ತಯಾರಿದ್ದೆ ಸಿಡಿದ ಗುಂಡಿನದ್ದೇನೂ ನೋವಿಲ್ಲ, ಬೆನ್ನಿಗೆ ಇರಿದ ಚಾಕು ಮಾತ್ರ ಪಕಪಕನೆ ನಗುತ್ತಿದೆ, ನಿಮಗೆ ಗೊತ್ತೇನು - ಇರಿದವರಿಗೂ ಬೆನ್ನಿರುತ್ತದೆ; ಬೆಂಕಿಯಲ್ಲಿ ಅರಳುವ ಹೂವು ನರಳಲು ಹೆದರುವುದಿಲ್ಲ, ಕೊಳ್ಳಿ ಇಡುವವರೇ ತಲೆಕೆಡಿಸಿಕೊಳ್ಳಬೇಡಿ ನನಗಂತೂ ಅಂತ್ಯವಿದೆ ನಿಮಗೂ ಕೂಡಾ; ಎಷ್ಟೇ ಬಲಶಾಲಿಯಾದರೂ ನ್ಯಾಯಕ್ಕೆ ಬೆಲೆ ಇದ್ದೇ ಇದೆ ಕಣ್ಣು ಕೆಂಪಗಾದರೇನಂತೆ ಎದೆ ನಡುಕ ತಪ್ಪೀತೇ? ಸದ್ದಿಲ್ಲದೆ ಏಳುವ ಸೂರ್ಯ ಸದ್ದು ಮಾಡದೆ ಮುಳುಗಲೇ ಬೇಕು ಮೂರ್ಖ ,... ಏಳುವುದು- ಮುಳುಗುವುದು ಜಗದ ನಿಯಮ; ನಗುನಗುತ್ತಾ ಮಾತಾಡಿ ಸ್ನೇಹದ ಬಲೆಬೀಸಿ ಉಸಿರನ್ನೇ ವಿಷವಾಗಿಸುವವರೇ ದಯವಿಟ್ಟು ಕ್ಷಮಿಸಿ ಬೆತ್ತಲೆ ಜಗತ್ತಿದು ಅಂಗಿ ತೊಟ್ಟಿದ್ದೇ ತಪ್ಪು; ಸತ್ಯವೂ ಇದೆ ನ್ಯಾಯವೂ ಇದೆ ಯಮ ಬಂದರೆ ಈಗಿಂದೀಗಲೇ ನಾ ತಯಾರು ನೀವು!?        - ಜಾನ್ ಸುಂಟಿಕೊಪ್ಪ 

ನಾನೇನು ಕೊಂಡೊಯ್ಯಲಿ

  ಇವನದ್ದು ಹೊಸ ಬಂಗಲೆಯಾಯಿತೆಂದು ಅವನು ಹೊಸ ಗಾಡಿ ಕೊಂಡ ಅದಕ್ಕೇ ಮತ್ತೆ.. ನಾನೂ ಆರಂಭಿಸಿದೆ  ಬಾಚಿಕೊಳ್ಳಲು - ತುಂಬಿಸಿಕೊಳ್ಳಲು; ಅವನೊಬ್ಬ ದೇಶ ಸುತ್ತಿದನೆಂದು ಇವನು ವಿದೇಶಕ್ಕೇ ಹಾರಿಬಿಟ್ಟ  ಅದಕ್ಕೇ ಮತ್ತೆ.. ನಾನೂ ಆರಂಭಿಸಿದೆ  ಸುತ್ತಲು - ಮೇಯಲು; ಇವನು ಗೋಡೆಗೆ ಸುಣ್ಣ ಬಿಳಿದನೆಂದು ಅವನು ತಡೆಗೋಡೆಗೂ ಬಣ್ಣ ಬಳಿದುಬಿಟ್ಟ ಅದಕ್ಕೇ ಮತ್ತೆ,.. ನಾನೂ ಆರಂಭಿಸಿದೆ - ಊಸವರಳ್ಳಿಯಂತೆ ಬಣ್ಣ ಬದಲಾಯಿಸಲು; ಅವರು ಮಾಡಿದ್ದೆಲ್ಲ ನನಗೂ ಮಾಡಬೇಕೆನ್ನಿಸುವಾಗ ಅವನು ಸತ್ತ ಇವನೂ ಸತ್ತ ಇದೀಗ ನನ್ನ ಸರದಿ ಆದರೆ,.. ನನಗೀಗ ಚಿಂತೆ ಅವರೆಲ್ಲ ಬಿಟ್ಟೇ ಹೋದರು ನಾನೇನು ಕೊಂಡೊಯ್ಯಲಿ !? ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್ , ಮುಂಬಯಿ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ

ಆಶಾವಾದಿ ಕಿರಣ

ಅರುಣೋದಯದ ಕಿರಣಗಳೊಂದಿಗೆ ಒಂದು ಬೆಳಕಿನ ಕಿರಣ ಆತ್ಮವನ್ನೇ ಸೀಳಿ ಪಿಸುಗುಟ್ಟಿತು -  ಹಿಮ್ಮೆಟ್ಟಬೇಡ... ನಾನೇ.. ಆಶಾವಾದಿ... ಹೊತ್ತೇರುವ ಮುನ್ನವೇ ಒಲೆಯೇರಿದ ಮಡಕೆಯಲಿ ಬೇಯಲು ಅನ್ನವಿಲ್ಲ, ಕುದಿಯುತ್ತಿರುವುದು ಮಾತ್ರ ಬಿಸಿರಕ್ತ; ಬೇಯುತ್ತಿರುವ ತರಕಾರಿಯಲ್ಲೂ ಗುಡಿಸಲ ತುಂಬ ಬೆಂದ ಮಾಂಸದ ಘಮಲು; ಮನದೊಳಗೂ ಮನೆಯೊಳಗೂ ಕಾದಾಟ ತಡೆಯಲಾರದೆ ಅಂಗಳಕ್ಕಿಳಿದರೆ ಅದೇ ಬೆಳಕಿನ ಕಿರಣದ ಆಲಿಂಗನ ಆಡುವ ಕಂದಮ್ಮಗಳದ್ದು ಮಾತ್ರ ಮಾರಾಮಾರಿ ನೆರೆಮನೆಯವನ ಹೋಮ- ಹವನ ವ್ಯರ್ಥ  ನಮ್ಮ ಧರ್ಮಗಳಿಗೇಕೆ ಈ ಗ್ರಹಣ!? ಆ ಕಿರಣ ನನ್ನನ್ನು ಮುನ್ನಡೆಸುತ್ತಿದೆ ಜತೆಗೆ ನೆತ್ತಿ ಸುಡುವ ಬಿಸಿಲು ನೆರೆಯವನ ಕಾಂಪೌಂಡು ಮಾತ್ರ ಸಂಬಂಧಗಳ ಹೂತು ನಿರಾಳವಾಗಿದೆ ಆಶಾವಾದಿ ಕಿರಣ ಪಿಸುಗುಟ್ಟುತ್ತಿದೆ -  ಬದಲಾವಣೆಗೆ ಹಾತೊರೆಯುತ್ತಿರುವೆ... ದಿನದಿನವೂ ಕಾಯುತ್ತಿರುವೆ... ಕೊಂಕಣಿ ಮೂಲ: ಪ್ರಸನ್ನ ನಿಡ್ಡೋಡಿ , ಮುಂಬಯಿ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ

ಅಂತ್ಯಕ್ರಿಸ್ತ

 ಬರಬೇಕಾದವರು ಇವರೇ ಅಂದುಕೊಂಡಿದ್ದೆ ಬಂದವರು ಅವರಲ್ಲ; ಅಂತ್ಯಕಾಲ ಸೂಚ್ಯಕಾಲವೆಂದು ಶತಶತಮಾನಗಳಿಂದ ಮೈಪರಚಿಕೊಂಡದ್ದೇ ಬಂತು  ಗೆತ್ಸೆಮನಿ- ಗೋಲ್ಗೊತ್ತಾ ಎಂದು ಶಿಲುಬೆ ಹೊತ್ತದ್ದೇ ಆಯಿತು ಯುಗಯುಗಾಂತರಕ್ಕೂ ಕಪಟ ಪ್ರವಾದಿಗಳದ್ದೇ ಕಾರುಬಾರು ಬರಬೇಕಾದವರು ಇವರಲ್ಲ; ಅಭಿವೃದ್ಧಿ ಕ್ರಿಸ್ತ ಅಧಿಕಾರ ಕ್ರಿಸ್ತ ಪಾಪಕ್ರಿಸ್ತ ಪುಣ್ಯಕ್ರಿಸ್ತ ಉಘೇ...ಉಘೇ... ಎಂದು ಸಂಭ್ರಮಿಸದಿರಿ ಇವರೇ ಆ ಅಂತ್ಯಕ್ರಿಸ್ತ ! ತಿಂದುಂಡು ತೇಗಿ ಕ್ಯಾಕರಿಸಿ ಉಗಿದು ಮೈಯೆಲ್ಲಾ ಮಾನವಾಗಿ ಕಣ್ಣುಗಳೆಲ್ಲಾ ಕಿವಿಗಳಾಗಿ ಮೌನವೆಲ್ಲಾ ಮಾತಾಗಿಸಿ ಮಾತೆಲ್ಲಾ ನೆಪವಾಗಿಸಿ ಇವರದ್ದು ಅವರಿಗೆ ಅವರದ್ದು ಇವರಿಗೆ ತೇಲಾಡಿಸಿ ಜಾಲಾಡಿಸಿ ಗುಡಿಸಿ ಗುಂಡಾಂತರ ಮಾಡುವವರಿವರು ; ಬರಬೇಕಾದವರು ಯೇಸುಕ್ರಿಸ್ತ ಕ್ಷಮಿಸಿ ... ಬಂದಿರುವುದು ಅಂತ್ಯಕ್ರಿಸ್ತ !                      - ಜಾನ್ ಸುಂಟಿಕೊಪ್ಪ