Posts

Showing posts from November, 2015

***** ಸತ್ಯ *****

ಒಂದು ರಾತ್ರಿ ಗಲಭೆಯಾದ ಬೀದಿಗಳಲ್ಲಿ ಭಾರವಾದ ಹೆಜ್ಜೆಯೊಂದಿಗೆ ಗೊಣಗಿದೆ, 'ಯಾವುದು ಸತ್ಯ ? ' ಬೀದಿಯೊಂದು ನರಳಿತು, 'ದೇಶಪ್ರೇಮವೇ ಸತ್ಯ!' ಸತ್ಯಾಸತ್ಯತೆಯ ಪರಾಮರ್ಶೆಗೂ ಮುನ್ನ ಗಲ್ಲಿಯೊಂದು ಅರಚಿತು, 'ಧರ್ಮಾಂಧತೆಯೇ ಸತ್ಯ!' ಬೀದಿಬೀದಿಗಳ ವಾಗ್ವಾದಕ್ಕೆ ಹೆದರಿ ನಾನು ಓಡಲಾರಂಭಿಸಿದೆ... ಬಸವಳಿದು ಕಡೆಗೊಮ್ಮೆ ನಿಂತಾಗ ಕತ್ತಲೆಯ ಕಂಬಳಿ ಹೊದ್ದ ಆ ಟಾರು ರಸ್ತೆ ಬಿಕ್ಕುತ್ತಾ ಹೇಳಿತು, 'ಸತ್ಯವೆಂದರೆ ಕಾಣದ ಕೈ...!?' - ಜಾನ್ ಸುಂಟಿಕೊಪ್ಪ.

ನೀನು ಹೋದ ರಾತ್ರಿ

ನೀನು ಹೋದ ರಾತ್ರಿ ಆ ಬಾಗಿಲು ತೆರೆದೇ ಇತ್ತು... ಹೃದಯದ ಆಳದಾಳಕ್ಕೂ ಇಳಿದ ಕೆಂಪು ಬೇರುಗಳು ತಮ್ಮಷ್ಟಕ್ಕೇ ಇರಿದುಕೊಳ್ಳುತ್ತಿದ್ದವು; ಹೊದ್ದುಕೊಂಡಷ್ಟೂ ಮಲಗದ ಈ ಕಣ್ರೆಪ್ಪೆಗಳಿಗೂ ಗಲ್ಲ ಜಾರುವ ಬಿಸಿ ಕಂಬನಿಯೆಡೆ ಗೂಢಚರ್ಯ... ನೀನು ಹೋದ ರಾತ್ರಿಯಲಿ ನಿಜಕ್ಕೂ ಬೆಳದಿಂಗಳಿಲ್ಲ, ಅದೇನಿದ್ದರೂ ಆ ಕೂಸ ಕಣ್ಣೊಳಗೆ ಹುಡುಕಬೇಕಷ್ಟೇ.., ನೀನು ಹೋದ ರಾತ್ರಿ ಕೆಂಪಿಗೂ- ಬಿಳುಪಿಗೂ ಸಂಧಾನ ಸಭೆ, ಅವೆರಡೂ ಸೇರಿ ನಡೆದೂ ನಡೆದೂ ಇದೀಗ ಎಲ್ಲೆಲ್ಲೂ ಕಪ್ಪು ಕತ್ತಲು... ನಿಜ ನಿಜ.. ನೀನು ಹೋದ ರಾತ್ರಿ ಆ ಬಾಗಿಲು ತೆರೆದೇ ಇತ್ತು.. ಬಂದೂಕಿನ ನಳಿಕೆಗಳು ಕೊಂಚವಷ್ಟೇ ಇಣುಕಿತು, ಲಾಂಗು ಮಚ್ಚುಗಳಿಗೆ ಕೊಂಚವಷ್ಟೇ ಬಾಯಾರಿತು.. ಶ್... ಮಣ್ಣ ಹೊದ್ದು ಮಲಗಿದೆ ಕೂಸು ಎಚ್ಚರ...ಎಚ್ಚರ... - ಜಾನ್ ಸುಂಟಿಕೊಪ್ಪ.

ಅದು-ಇದು

ಊರೂರಿಗೆ ತಲೆನೋವಾದ 'ಅದು' ತಿನ್ನುವ ಜನಗಳೇ ಓಡುವುದ ಕೊಂಚ ನಿಲ್ಲಿಸಿ, ಉಪ್ಪು-ಖಾರ-ಮಸಾಲೆಯಾಗಲು ನಾನೂ ಸಿದ್ಧ; ಊರೂರಿನ ಅಟ್ಟಹಾಸವಾದ 'ಇದು' ತಿನ್ನುವ ಜನಗಳೇ ಬಾಕು,ಕತ್ತಿ ಲಾಂಗುಗಳ ಚೂಪಾಗಿಸಿ, ಕೊಚ್ಚಿ ಕೊಚ್ಚಿ ಕೊಯ್ಯಿಸಿಕೊಳ್ಳಲು ಈ ದೇಹವೂ ಬದ್ದ; ಊರೂರಿನ ನೆತ್ತರು ಚಪ್ಪರಿಸುವ ಜನಗಳೇ ಕಾಲೆಳೆದು ಓಡೋ ನೆಮ್ಮದಿಯನ್ನಿಡಿಯಿರಿ ನೆತ್ತರ ಕಲೆಗೆ ಹೆದರಿ ಬೇಸತ್ತು ಮಂಗಳ ಗ್ರಹಕ್ಕೇ ನೆಗೆದು ಬಿಟ್ಟೀತು,,, 'ಅದು-ಇದು'ತಿನ್ನಲು ನಾವು ನೀವೇ ಇಲ್ಲವಾದೀತು.... - ಜಾನ್ ಸುಂಟಿಕೊಪ್ಪ.

ಅವ್ವ

Image
ನನ್ನ ಅವ್ವ ಸುಟ್ಟ ರೊಟ್ಟಿಗಳೆಲ್ಲಾ ಇದೀಗ ನೆತ್ತರಾಗಿದೆ, ಆ ನೆತ್ತರು ನರನಾಡಿಗಳಲ್ಲೆಲ್ಲಾ ಹರಿದು ಈ ದೇಹ ಪುಷ್ಪರಾಗ; ಸೀದು ಹೋದ ಅವ್ವನ ಕನಸುಗಳೆಲ್ಲಾ ನನ್ನ ಬದುಕಿನಲಿ ನಳನಳಿಸುತ್ತಿವೆ, ಆ ಕನಸುಗಳು ನನ್ನ ಬದುಕ ಅರಳಿಸಿ ಈ ಜೀವನ ಸಂತೃಪ್ತ; ಸೋತು ಹೋದ ಆ ಸುಕ್ಕುಗಳೆಲ್ಲಾ ಅವ್ವನ ಬೆವರ ಹನಿಗಳ ನೆನಪುಗಳು, ಇಂಗಿ ಹೋದ ಕಣ್ಣೀರು ಮೊಳಕೆಯೊಡೆದು ಕಣ್ಣ ತುಂಬಾ ಕಾಂತಿ; ಅವ್ವಾ,,, ನೀನಿದೋ ಹಣ್ಣೆಲೆಯಾದೆ, ದೂರದ ಗಾಳಿ ಸಮೀಪಿಸುತ್ತಿದೆ ನಿನ್ನನ್ನು-ನನ್ನನ್ನೂ; - ಜಾನ್ ಸುಂಟಿಕೊಪ್ಪ.