Posts

Showing posts from March, 2019

ಬೆಳದಿಂಗಳ ಹನಿಗಳು

1 ಅಮವಾಸ್ಯೆಯ ಕತ್ತಲಾದ ಕೂಸು ಬೆಳದಿಂಗಳಾಗಿ ಮತ್ತೆ ಹುಟ್ಟಿದ್ದಾಳೆ ಬತ್ತಿ ಹೋದ ಕಂಗಳಲ್ಲಿಂದು ಆನಂದಬಾಷ್ಪ; * 2 ಕನಸುಗಳು ಕಳೆದು ಹೋಗಿದ್ದವು ಮಣ್ಣ ಕಣಕಣದಲ್ಲೂ ಮೊಣಕಾಲೂರಿ ತಡಕಾಡಿದ್ದೆವು, ಇಗೋ ಮತ್ತೆ ಮಡಿಲು ಸೇರಿದ್ದಾಳೆ! 3 ಲೇಬರ್ ವಾರ್ಡಿನ ಮುಂದೆ ಬಸಿರ ನೋವನನ್ನನುಭವಿಸುತ್ತಿದ್ದೆ ಮಗಳು ಮತ್ತೆ ಹುಟ್ಟಿ ಬಂದಳು ಜತೆಗೆ ನಾನೂ ಕೂಡಾ! 4 ತಂಗಿಯೇ ಬೇಕೆಂದು ಹಟಕ್ಕೆ ಬಿದ್ದ ಮುದ್ದುಮಗಳಿಗೆ ಇದೀಗ ಗೆದ್ದ ಸಂಭ್ರಮ ಬಹುಶಃ ತಂಗಿ ಮಾತು ಕೊಟ್ಟಿರಬೇಕೇನೋ; * 5 ನಿರೀಕ್ಷೆ ಎಂದರೇನು? ಕನಸು ಬಸಿರಾಗುವುದು ಬಸಿರು ಉಸಿರಾಗುವುದು ಮತ್ತು ಉಸಿರು ನನಸಾಗುವುದು 6 ಕಂಗಾಲಾಗಿದ್ದ ಹೆಂಡತಿಗೆ ನವಮಾಸವೂ ಆತಂಕವೇ ಇದೀಗ ತಾಯಿ ಮಗುವಾಗಿದ್ದಾಳೆ ಮತ್ತು ಮಗು ತಾಯಿಯ ತಾಯಿ; - ಜಾನ್ ಸುಂಟಿಕೊಪ್ಪ . posted from Bloggeroid