ಅವ್ವ

ಅವ್ವ ...
ಚರಿತ್ರೆಯ ಪುಟವಾಗಿದ್ದಾಳೆ ;

ನಾನು ಮಾತ್ರ
ಚಪ್ಪಲಿ ಬಿಚ್ಚಿಟ್ಟು ಮುದುರಿಕೊಳ್ಳುತ್ತೇನೆ,
ಮಣ್ಣ ಕಣಕಣವೂ
ಅವ್ವನ ಒಡಲಾದಾಗ
ಹಾಗೇ ಸುಮ್ಮಗೆ ಬಿದ್ದುಕೊಳ್ಳುತ್ತೇನೆ;


ಅವ್ವ
ಯಾವ ಮಣ್ಣಲ್ಲಿ ಮಣ್ಣಾದಳೋ,
ಯಾವ ದಾಹಕ್ಕೆ ಬಲಿಯಾದಳೋ,
ಎಲ್ಲೆಂದು ಹುಡುಕಲಿ!?

ಅವ್ವಳ ಒಡಲಿನಲ್ಲಿದ್ದ
ಅಷ್ಟೂ ದಿನಗಳು ನನ್ನ ಕಾಡುತ್ತಿವೆ,
ಹಸಿವಿನ- ಬೆವರಿನ ನಿಟ್ಟುಸಿರುಗಳು
ಬುಸಬುಸ ಬಿಡುತ್ತಿದ್ದ ಆ ಏದುಸಿರುಗಳು
ತೆವಲಿಗಾಗಿ-ಸುಖಕ್ಕಾಗಿ ಅಡವಿಟ್ಟ ಆ
ಸದ್ದಿಲ್ಲದ ಚೀತ್ಕಾರಗಳೂ
ಗರ್ಭದೊಳಗೆ ಕೇಳಿಲ್ಲವೆಂದುಕೊಂಡೆಯಾ!?


ಅವ್ವ...
ಈ ಚರಿತ್ರೆ ಯಾರಿಗೆ ಬೇಕು ಹೇಳು?
ಒಡಲಿನಿಂದ ಮಡಿಲಿಗೆ
ಮಡಿಲಿನಿಂದ ತೋಳತೆಕ್ಕೆಗೆ
ಆಮೇಲೆ ಪೊಡವಿಗೆ ಜಾರಿಜಾರಿ
ಚರಿತ್ರೆಯ ಪುಟವಾಗುವುದು
ಸದಾ ಇದ್ದದ್ದೇ...
ಥೂ...ಹಾಳು ಜಗತ್ತು
ಗೊಗ್ಗ ಬರದಿದ್ದರಷ್ಟೇ ಸಾಕು
ಸುಮ್ಮಗೇ ಮುದುರಿಕೊಳ್ಳುತ್ತೇನೆ..
ಸುಮ್ಮಗೇ ಬಿದ್ದುಕೊಳ್ಳುತ್ತೇನೆ...
ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..