ಅಂತ್ಯಕ್ರಿಸ್ತ
ಬರಬೇಕಾದವರು ಇವರೇ ಅಂದುಕೊಂಡಿದ್ದೆ ಬಂದವರು ಅವರಲ್ಲ;
ಅಂತ್ಯಕಾಲ ಸೂಚ್ಯಕಾಲವೆಂದು
ಶತಶತಮಾನಗಳಿಂದ ಮೈಪರಚಿಕೊಂಡದ್ದೇ ಬಂತು
ಗೆತ್ಸೆಮನಿ- ಗೋಲ್ಗೊತ್ತಾ ಎಂದು
ಶಿಲುಬೆ ಹೊತ್ತದ್ದೇ ಆಯಿತು
ಯುಗಯುಗಾಂತರಕ್ಕೂ ಕಪಟ ಪ್ರವಾದಿಗಳದ್ದೇ ಕಾರುಬಾರು
ಬರಬೇಕಾದವರು ಇವರಲ್ಲ;
ಅಭಿವೃದ್ಧಿ ಕ್ರಿಸ್ತ ಅಧಿಕಾರ ಕ್ರಿಸ್ತ
ಪಾಪಕ್ರಿಸ್ತ ಪುಣ್ಯಕ್ರಿಸ್ತ
ಉಘೇ...ಉಘೇ... ಎಂದು ಸಂಭ್ರಮಿಸದಿರಿ
ಇವರೇ ಆ ಅಂತ್ಯಕ್ರಿಸ್ತ !
ತಿಂದುಂಡು ತೇಗಿ ಕ್ಯಾಕರಿಸಿ ಉಗಿದು
ಮೈಯೆಲ್ಲಾ ಮಾನವಾಗಿ
ಕಣ್ಣುಗಳೆಲ್ಲಾ ಕಿವಿಗಳಾಗಿ
ಮೌನವೆಲ್ಲಾ ಮಾತಾಗಿಸಿ
ಮಾತೆಲ್ಲಾ ನೆಪವಾಗಿಸಿ
ಇವರದ್ದು ಅವರಿಗೆ
ಅವರದ್ದು ಇವರಿಗೆ
ತೇಲಾಡಿಸಿ ಜಾಲಾಡಿಸಿ
ಗುಡಿಸಿ ಗುಂಡಾಂತರ ಮಾಡುವವರಿವರು ;
ಬರಬೇಕಾದವರು ಯೇಸುಕ್ರಿಸ್ತ
ಕ್ಷಮಿಸಿ ...
ಬಂದಿರುವುದು ಅಂತ್ಯಕ್ರಿಸ್ತ !
- ಜಾನ್ ಸುಂಟಿಕೊಪ್ಪ
Comments
Post a Comment