ದುಃಖವೆಂದರೆ,
ಹೀಗೇ....
ನವಮಾಸಗಳ ಕನಸು-ನಿರೀಕ್ಷೆಗಳನ್ನು
ಬಿಳಿಯುಡುಪಿನಲ್ಲಿ ಗಂಟುಕಟ್ಟುವುದು
ಮತ್ತೆ...
ಗುಂಡಿ ತೋಡಿ ಮಣ್ಣುಮುಚ್ಚಿ
ಮುಗುಮ್ಮಾಗಿ ಬಿಕ್ಕಿಬಿಕ್ಕಿ ಅಳುವುದು;
ನಾನೇನೂ ಅಬ್ರಹಾಮನಲ್ಲವಲ್ಲಾ,
ಅದಕ್ಕೋ ಏನೋ
ಬಲಿಯರ್ಪಣೆ ಆಗಿಯೇ ಹೋಯಿತು!
ಎರಡು ಮಾತ್ರೆ ತನ್ನಿ ಎಂದು
ಚೀಟಿ ಬರೆದು ಕೊಟ್ಟರು...
ಅದೇಕೆಂದು ಕೇಳಿದೆ
ನಿರ್ಭಾವುಕರಾಗಿ ಬಿಡಿಸಿ ಬಿಡಿಸಿ ಹೇಳಿದರು
ಅರ್ಥವಾಯಿತು ಬಿಡಿ ಅಂದುಕೊಂಡೆ-
ಅಮೃತವನ್ನು ಬತ್ತಿಸುವುದು
ಎಷ್ಟೊಂದು ಸುಲಭ;
ತಂಗಿಪಾಪು ಬೇಕು
ತಂಗಿಪಾಪು ಬೇಕೆಂದು
ಸದಾ ಹಾತೊರೆಯುತ್ತಿದ್ದ ಮಗಳು
ಇಂದು ವಾರ್ಡಿಗೆ ಓಡೋಡಿ ಬಂದಳು.
ಕಂಡಕಂಡ ಹಾಸಿಗೆಗಳಿಗೆ ಓಡೋಡಿ
ಬಗ್ಗಿ ಇಣುಕಿ ಹುಡುಕಿದಳು,
ಬೇಸತ್ತು ಕಡೇಗೆ ತುಟಿ ಕಚ್ಚಿ ಹೇಳಿದೆ-
'ತಂಗಿಪಾಪು ದೇವರ ಬಳಿಯಿದೆ ಮಗಳೇ'
ಮಗಳಿಗೀಗ ಮುನಿಸು-
ದೇವರ ಮೇಲೋ !?
ತಂಗಿಯ ಮೇಲೋ ?!
ಕೇಳುವ ಧೈರ್ಯ ನನಗಿಲ್ಲ;
*
ಎಲ್ಲಾ ತಲೆ ಬಿಸಿ ನಡುವೆ
ನನ್ನ ಚಪ್ಪಲಿ ಕಾಣೆಯಾಯಿತು!
ಹಿರಿಯರಿಗೆಲ್ಲಾ ಸಮಾಧಾನ,
'ಹೋಗಲಿ ಬಿಡು ಶನಿ ತೊಲಗಿತು'
ನನಗೆ ಮಾತ್ರ ಅರ್ಥವಾಗುತ್ತಿಲ್ಲ-
ಅಷ್ಟಕ್ಕೂ ಶನಿ ಯಾವುದು?!
- ಜಾನ್ ಸುಂಟಿಕೊಪ್ಪ.
Comments
Post a Comment