*ಎಲ್ಲಾರಂತಲ್ಲ ನನ್ನ ಹಸುಗೂಸು*

ಎಲ್ಲಾರಂತಲ್ಲ ನನ್ನ ಹಸುಗೂಸು
ಅಳುವುದೇ ಇಲ್ಲ!
ಸದ್ದು ಮಾಡದೇ ಮಲಗಿದ್ದಾಳೆ
ಸಮಾಧಿಯೊಳಗೆ;

ಎಲ್ಲಾರಂತಲ್ಲ ನನ್ನ ಹಸುಗೂಸು
ಕಣ್ಣು ಬಿಡಲೇ ಇಲ್ಲ!
ಕ್ರೂರ ಜಗತ್ತು ಕಾಣುವ ಮೊದಲೇ
ಅರ್ಥ ಮಾಡಿಕೊಂಡು ಬಿಟ್ಟಳು;

ಎಲ್ಲಾರಂತಲ್ಲ ನನ್ನ ಹಸುಗೂಸು
ಜೋಳಿಗೆ ತೊಟ್ಟಿಲು ಇಲ್ಲವೇ ಇಲ್ಲ
ಭೂಮಿತಾಯ ಮಡಿಲೇ ಬೆಚ್ಚವಂತೆ
ನೋಡಿ,... ಸದ್ದಿಲ್ಲ!

ಎಲ್ಲರಂತಲ್ಲ ನನ್ನ ಹಸುಗೂಸು
ಸಾವಿನೊಂದಿಗೇ ಹೋರಾಡಿ
ತಾಯಿಗೆ ಜನ್ಮ ನೀಡಿದ್ದಾಳೆ;

ಎಲ್ಲರಂತಲ್ಲ ನನ್ನ ಹಸುಗೂಸು
ಮಡಿಲು ಏರಿ
ಕತೆಹೇಳಿ ಮಲಗಿಸೆಂದು ಸತಾಯಿಸುವ
ದೊಡ್ಡವಳಂತೆ ಅಲ್ಲವೇ ಅಲ್ಲ!
ಸುಡುಗಾಡಿನ ಸಮಾಧಿಗಳ
ಪಿಸುಗುಟ್ಟುವ ಕತೆಗಳಿಗೇ ತಲೆದೂಗುತ್ತಾಳೆ;

ಎಲ್ಲರಂತಲ್ಲ ನನ್ನ ಮುದ್ದು ಹಸುಗೂಸು
ನಿರ್ಜನ ಬೀದಿಯುದ್ದಕ್ಕೂ
ಬೊಗಳಿ ಊಳಿಡುವ
ನಾಯಿ ನರಿಗಳೇ
ದಯವಿಟ್ಟು ಸುಮ್ಮಗಾಗಿ-
ಎಲ್ಲರಂತಲ್ಲ ನನ್ನ ಹಸುಗೂಸು!
ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..