ಹೀಗೊಂದು ಹತ್ಯೆ

ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ನಾನಾಗ ಕುಶಾಲನಗರದ ಕೆ.ಬಿ.ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ದ್ವಿತೀಯ ಪಿ.ಯು.ಸಿ.ಫಲಿತಾಂಶ ಪ್ರಕಟವಾಗಿತ್ತು,ಆಗ ಮೊಬೈಲ್ ಇಲ್ಲದ ಕಾರಣ ಫಲಿತಾಂಶ ನೋಡಲು ಕಾಲೇಜಿಗೇ ಹೋಗಬೇಕಿತ್ತು.  ನಾನೂ ನನ್ನ ಗೆಳೆಯ ದಿಲೀಪನೂ ಅಂದು ಕಾಲೇಜಿಗೆ ಹೋದೆವು. ಗೆಳೆಯ ಪಾಸಾಗಿದ್ದ ; ಕಾಲೇಜಿನ ಪ್ರಾಂಶುಪಾಲರು ನನ್ನನ್ನು ತಬ್ಬಿ ಮುದ್ದಾಡಿ ಅಭಿನಂದಿಸಿದರು . ಕಾಲೇಜಿನ ಇತಿಹಾಸದಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರೇಯಸ್ಸು  ನನ್ನದಾಗಿತ್ತು. ನನ್ನಮ್ಮಳಿಗೆ ಅಂಕಪಟ್ಟಿ ತೋರಿಸಲೆಂದು ಸಡಗರದಿಂದ ಮನೆಗೆ ಹೊರಟಾಗ ಒಂದು ಘಟನೆ ನಡೆಯಿತು. ಬಸ್ ಸ್ಟ್ಯಾಂಡಿನ ಹಿಂಬದಿ ಮೈದಾನದಲ್ಲಿ ಜನರ ಗುಂಪೊಂದಿತ್ತು. ಯಾರೋ ಒಬ್ಬ ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿಹಾಕಿದ್ದರು. ಆ ಮನುಷ್ಯ ಬಲು ಕೆಟ್ಟದಾಗಿ ಎಲ್ಲರನ್ನೂ ಶಪಿಸುತ್ತಿದ್ದ. ಒಂದಿಬ್ಬರು ಕಲ್ಲೆಸೆಯುತ್ತಿದ್ದರು , ಕೆಲವರು ಜೋರಾಗಿ ನಗುತ್ತಿದ್ದರು. ನನಗೆ ಇದು ಸರಿ ಕಾಣಲಿಲ್ಲ , ಗೆಳೆಯನಿಗೆ ಈ ಮನುಷ್ಯನನ್ನ ಬಿಡಿಸುವ ಅಂದೆ. "ಈ ಹುಚ್ಚ ಯಾರಿಗೆ ಏನು ತೊಂದರೆ ಕೊಟ್ಟಿದ್ದಾನೋ ಗೊತ್ತಿಲ್ಲ , ಬಿಟ್ಟರೆ ಇನ್ನೇನು ಅನಾಹುತವಾಗುತ್ತೋ , ನಡಿ ಹೋಗೋಣ " ಅಂದ. ನನಗೂ ಸರಿಯೆನಿಸಿತು ಅವನ ಮುಖ ನೋಡಲೂ ಭಯವಾಗಿ ಸೀದಾ ಬಸ್ ಸ್ಟ್ಯಾಂಡಿನೊಳಗೆ ನಡೆದೆ. ನಮ್ಮೂರಿಗೆ ಹೋಗುವ ಬಸ್ಸಿನಲ್ಲಿ ಡ್ರೈವರ್ ಹಿಂದಿನ ಸೀಟು ಸಿಕ್ಕಿತು . ಇನ್ನೂ ಡ್ರೈವರ್ ಬರುವಷ್ಟರಲ್ಲಿ ಆ ಮಾನಸಿಕ ಅಸ್ವಸ್ಥ ಅದು ಹೇಗೋ ಬಿಡಿಸಿಕೊಂಡು ಬಸ್ ಸ್ಟ್ಯಾಂಡಿನೊಳಗೇ ಬಂದುಬಿಟ್ಟ. ಗದ್ದಲದ ನಡುವೆ ಸೀದಾ ನಮ್ಮ ಬಸ್ಸಿಗೇ ಹತ್ತಿ ಒಳಗೆ ಬಂದ. ಡ್ರೈವರ್ ಸೀಟಿನವರೆಗೂ ಬಂದವನಿಗೆ ನಾನು ಕಾಣಿಸಿಕೊಂಡೆ. ಅವನಿಗೆ ಏನನ್ನಿಸಿತೋ ಗೊತ್ತಿಲ್ಲ ನನ್ನ ಕಪಾಳಕ್ಕೆ ಒಂದು ಸರಿಯಾಗಿ ಬಾರಿಸಿದ ! ಬಸ್ಸು , ಗೆಳೆಯ,ಆ ಜನರು ಎಲ್ಲರೂ ಸ್ತಬ್ದರಾದರು. ಮಾನಸಿಕ ಅಸ್ವಸ್ಥ ಗೆಲುವಿನಿಂದ ನಗುತ್ತಾ , ಶಪಿಸುತ್ತಾ ,ಕುಣಿಯುತ್ತಾ ಏನೂ ನಡೆದೇ ಇಲ್ಲವೆಂಬಂತೆ ಬಸ್ಸಿಳಿದು ಹೋದ. ನಾನು ಭೂಗರ್ಭದೊಳಗೆ ಇಳಿದುಹೋದಂತೆ ಭಾಸವಾಯಿತು. ಏನೂ ತಪ್ಪು ಮಾಡದೆ ಸಾರ್ವಜನಿಕವಾಗಿ ಹೊಡೆಸಿಕೊಂಡಿದ್ದೆ. ಯಾರೋ ಬಸ್ಸಿನಲ್ಲಿದ್ದ ಸದ್ಗೃಹಸ್ಥರು ಇವನೇನೋ ತೊಂದರೆ ಕೊಟ್ಟಿರಬೇಕು ಎಂದು ಗಲಗಲನೆ ನಕ್ಕರು. ಆ ನಗುವಿನೊಂದಿಗೆ ನನ್ನ ಪರೀಕ್ಷೆ ಫಲಿತಾಂಶ ಮರೆತುಹೋಯಿತು.

******************************

ಇಪ್ಪತ್ತು ವರ್ಷಗಳ ನಂತರ ಮತ್ತದೇ ಘಟನೆ ಮರುಕಳಿಸಿತು. ಪೂಜ್ಯ ಗುರುಗಳೊಬ್ಬರು ನಿವೃತ್ತರಾದರು. ಆಡಂಬರದ ಸ್ಮರಣೀಯ ಸಮಾರಂಭದಲ್ಲಿ ಅವರಿಗೆ ಸನ್ಮಾನ ಆಯೋಜಿಸಿದ್ದೆ. ಸನ್ಮಾನ ಸ್ವೀಕರಿಸಿ ತುಂಬಿದ ಸಭೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಇರಿದು ಇರಿದು ಸಂತೃಪ್ತರಾದರು. ಇದಾಗಿ ಒಂದು ಹಗಲು ಒಂದು ರಾತ್ರಿ ಕಳೆದರೂ ನಾನಿನ್ನೂ ರಕ್ತದ ಮಡುವಿನಲ್ಲೇ ಇದ್ದಂತೆ ಭಾಸವಾಗುತ್ತಿದೆ. 

Comments

  1. ಏನೂ ತಪ್ಪು ಮಾಡದೆ ನೀವೇಕೆ ಬೇಸರಿಸಬೇಕು ಸರ್? ಒಂದು ಪುಸ್ತಕ ಓದಿ ಅದರ ಗುಂಗಿನಲ್ಲೇ ಇರಿ. ಹೊಸ ಅನುಭವವಿದು. ಇನ್ನು ಮುಂದೆ ಇಂತಹ so called ಹಾರ ಹಾಕುವ ಕಾರ್ಯಕ್ರಮವನ್ನು ಆಯೋಜಿಸಬೇಡಿ.

    ReplyDelete
  2. ಸರ್ ನಾನು ನಿಮಗೆ ಮೊದಲೇ ಹೇಳಿದ್ದೆ. ಇಲ್ಲಿ ಹಸುಮನದ ಶುದ್ಧತೆಗಿಂತ. ಗೋಮುಖ ವ್ಯಾಘ್ರಗಳಿಗೆ ಬೆಲೆ ಹೆಚ್ಚು ಅಂತ. ಅತಿಯಾದ ಪ್ರಮಾಣಿಕತೆ ಒಳ್ಳೆಯದಲ್ಲ ಎಂಬುದನ್ನು ಇದು ಸಾಬೀತು ಪಡಿಸಿತು. ಚಿಂತೆ ಮಾಡದಿರಿ ಆದದ್ದೆಲ್ಲ ಒಳ್ಳೆಯದಕ್ಕೆ.

    ReplyDelete
  3. ಸಾರ್ ಕೆಲ ವಿಷಯಗಳಿಗೆ ಚಿಂತಿಸಬೇಡಿ.ನಿರ್ಲಕ್ಷಿಸಿ ಅಷ್ಟೆ.

    ReplyDelete
  4. ಎಲ್ಲವೂ ಪಾಠಗಳೇ ಸರ್. ನಾವು ಹೇಗಿರಬೇಕು ಎಂಬುದನ್ನು ಕಲಿಸುತ್ತಾ ಹೋಗುತ್ತವೆ ಅಷ್ಟೇ. Be happy sir.

    ReplyDelete

Post a Comment

Popular posts from this blog

ಏನೂ ಅಲ್ಲದವನಾಗುವುದೆಂದರೆ ..

***** ಕವಿತೆಯಾಗುವುದೆಂದರೇನು!?*****

ಪ್ರಾಣ