ಒಂದು ಸ್ವಗತ

ನಾನು
ಮತ್ತೆ ಹೊರಡಬೇಕಿದೆ….
ಈ ಊರು ಕೇರಿ ದೇಶ ಬಿಟ್ಟು
ದೂರ ಹೊರಡಬೇಕಿದೆ;

ಕತ್ತಲು ಕವಿದ ಈ ರಾತ್ರಿ
ನಿದ್ದೆಯಿಲ್ಲದೆ ಕಳೆಯಬೇಕಿದೆ
ಕರುಣೆಯಿಲ್ಲದ ಕಣ್ಣೀರು ಬಸಿದು
ಇಂದೇ ಉಸಿರಾಡಬೇಕಿದೆ
ನಾನು ಮತ್ತೆ ಹೊರಡಬೇಕಿದೆ;

ಮೊನ್ನೆ ಸುರಿದ ಮಳೆಯ ತಂಪು
ಒದ್ದೆ ಇಳೆಯ ಮಣ್ಣ ಕಂಪು
ಜೀವದ ಜೀವ ಪ್ರೀತಿಯ ಬಿಂಬ
ಅವಳ ಒಡಲಲಿ ಬೆಚ್ಚನಿರುವಾಗ
ಎಲ್ಲಾ ಬಿಟ್ಟು ಹೊರಡಬೇಕಿದೆ
ನಾನು ಮತ್ತೆ ಹೊರಡಬೇಕಿದೆ;

ಇಳೆಯನು ತಬ್ಬಿದ ಕತ್ತಲಿನಲ್ಲಿ
ಹೃದಯವ ಬಿರಿವ ನೋವಿನಲ್ಲಿ
ಆಗಸವೆಲ್ಲಾ ತಡಕಾಡುತಿರಲು
ಬೆಳಕು ಬೀರಿ ಹಾರುವ ವಿಮಾನ
ನಾಳೆ ನಾನೂ ಹಾರಬೇಕಿದೆ
ಸುಡುವ ಮರಳಲಿ ನರಳಿ ನರಳಿ
ಮಮತೆ-ಪ್ರೀತಿ ಪಕ್ಕಕ್ಕೆಸೆದು
ದಿನಾರಿಗಾಗಿ ಬಾಳಬೇಕಿದೆ
ನಾಳೆ ಮತ್ತೆ ಹೊರಡಬೇಕಿದೆ;

ಬಾಡಿದ ಅವಳ ಮೊಗವ ಕಂಡು
ಬರಸೆಳೆಯಬೇಕಿದೆ,
ಬಿಸಿಬಿಸಿ ಕಣ್ಣೀರನೊರೆಸಿ ಒಂದು
ಸವಿಮುತ್ತ ನೀಡಬೇಕಿದೆ
ನಾನು,..
ನೋವ ಮರೆತು ನಗಬೇಕಿದೆ
ಮತ್ತೆ ಹೊರಡಬೇಕಿದೆ;

ಭಾವನೆಗಳಿರದ ಟಿಕ್ ಟಿಕ್ ಮುಳ್ಳು
ಕರುಣೆಯಿಲ್ಲದೆ ನರಳುತಿರಲು
ಕಾಲನ ಕರೆಗೆ ಹೆಜ್ಜೆಯನಿರಿಸಿ
ಸುಮ್ಮಗೆ ನಡೆಯಬೇಕಿದೆ
ನಾನು ಮತ್ತೆ ನಡೆಯಬೇಕಿದೆ..




ಕೊಂಕಣಿ ಮೂಲ: ಸುನೀಲ್ ಕ್ರಾಸ್ತಾ
ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ .

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..