***** ಕವಿತೆಯಾಗುವುದೆಂದರೇನು!?*****

ಕವಿತೆಯಾಗುವುದೆಂದರೇನು!?
ಕಾಲನೆತ್ತಿ ಉಚ್ಚೆ ಹೊಯ್ಯಲು ಬಂದ
ಬೀದಿ ನಾಯಿಗೆ
ಲೈಟುಗಂಬವೊಂದು ಕೇಳಿತು,...
ಕತ್ತಲೊಳಗಿನ ಬೆಳಕನ್ನು
ಬೆಳಕಿನೊಳಗಿನ ಕತ್ತಲನ್ನೂ ಕಂಡು
ಊಳಿಡುವುದೇ ಕವಿತೆಯೆಂದಿತು ನಾಯಿ
ಲೈಟುಗಂಬಕ್ಕೂ ನಿಜವೆನ್ನಿಸಿತೇನೋ,,,
ಅಷ್ಟಕ್ಕೇ ಕರೆಂಟು ಹೋಗಿ
ಕತ್ತಲಿಗೂ ಬೆಳಕಿಗೂ ಕಾದಾಟವಾಗಿ
ಬೀದಿಯುದ್ದಕ್ಕೂ ಊಳಿಡುವಿಕೆ
ಕವಿತೆಯಾಯಿತು,,...


ಕವಿತೆಯಾಗುವುದೆಂದರೇನು!?
ಪರಪರ ಕೆರೆದುಕೊಳ್ಳುತ್ತಾ
ಕಾಲನೆಳೆದು ನಡೆಯುತ್ತಿದ್ದ ಹುಚ್ಚನಿಗೆ
ರಸ್ತೆಯೊಂದು ಕೇಳಿತು,,,
ಮಾತಿನೊಳಗಿನ ಅರ್ಥವನ್ನು
ಅರ್ಥದೊಳಗಿನ ಮಾತನ್ನೂ ಕಂಡು
ಗಲಗಲ ನಕ್ಕು ಅಳುವುದೇ ಕವಿತೆಯೆಂದ
ರಸ್ತೆಗೂ ನಿಜವೆನ್ನಿಸಿತೇನೋ...
ಅಷ್ಟಕ್ಕೇ 'ಅದು-ಇದು' ತಿನ್ನುವವರ ನಡುವೆ ಗಲಭೆಯಾಗಿ
ಮಾತಿಗೂ ಅರ್ಥಕ್ಕೂ ಕಾದಾಟವಾಗಿ
ರಸ್ತೆಯುದ್ದಕ್ಕೂ ನಗು-ಅಳು
ಕವಿತೆಯಾಯಿತು,,.,


ಇದೀಗ,...
ಲೈಟುಗಂಬಕ್ಕೂ ರಸ್ತೆಗೂ
ವಾಗ್ವಾದವಾಗಿ
ಕವಿತೆಯ ಕೊಲೆಯಾಗಿದೆ,,,,
- ಜಾನ್ ಸುಂಟಿಕೊಪ್ಪ.

Comments

Popular posts from this blog

ಏನೂ ಅಲ್ಲದವನಾಗುವುದೆಂದರೆ ..

ಪ್ರಾಣ