****** ಸಮ್ಮಿಲನ ******

ತನ್ನಷ್ಟಕ್ಕೇ ಹಾಡಿಕೊಳ್ಳುವ ಝರಿ,ಒಂದು ಚೂರೂ ತೂಕಡಿಸದೆ ನಿದ್ರಿಸುತ್ತಿರುವ ಆ ದೈತ್ಯಾಕಾರದ ಬೆಟ್ಟಗುಡ್ಡಗಳು,ಒಳಗೂ-ಹೊರಗೂ ನಿಗೂಢತೆಯನ್ನು ಹೊದ್ದುಕೊಂಡು ಸುಮ್ಮಗೇ ನಿಂತಿರುವ ನಾಲ್ಕುನಾಡು ಅರಮನೆ,ಸದ್ದಿಲ್ಲದೆ ಬಿದ್ದುಕೊಂಡ ಕಾಫಿತೋಟಗಳು ನನ್ನ ಶಾಲೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.ಶಾಲೆಯಿಂದ ಹೊರಬರುವ ಹೆಣ್ಣುಗಂಡುಗಳೆಂಬ ಪ್ರಾಣಿಗಳು ಯಂತ್ರಗಳಾಗಿ ರೂಪಾಯಿಯ ಅಮಲಿನಲ್ಲಿ ತೂರಾಡಿ ಈ ಹಸಿರನ್ನು ಕ್ರಮೇಣ ಇಲ್ಲವಾಗಿಸುತ್ತವೆ ಎಂದಷ್ಟೇ ಅವು ಬಲ್ಲವು,,,
ವೀಕೆಂಡುಗಳ ಮೋಜುಮಸ್ತಿಗಾಗಿ ಕೂಡಿಟ್ಟಿದ್ದನ್ನೇ ಕರಗಿಸಲಿಕ್ಕಾಗಿ ಬಣ್ಣಬಣ್ಣದ ಕಾರುಗಳಲ್ಲಿ ತೇಲಿಬರುವವರು,ತಮ್ಮ ಬೆತ್ತಲುತನವನ್ನು ಸಾರಿಸಾರಿ ಹೇಳುವವರು,ಮಾನವೀಯತೆ-ಶಿಸ್ತು-ಸಂಸ್ಕೃತಿಯನ್ನು ರಮ್ಮು ವಿಸ್ಕಿ ಬಿಯರಿನ ಟಿನ್ನುಗಳಲ್ಲೇ ಆವಾಹಿಸಿಕೊಳ್ಳುವವರು ನಮ್ಮ ಶಾಲೆಯನ್ನು 'ಕಾರ್ ಪಾರ್ಕಿಂಗ್' ಎಂದಷ್ಟೇ ತಿಳಿದಿದ್ದಾರೆ,,,
ಮೊನ್ನೆಮೊನ್ನೆ ನಡುಗುವ ಚಳಿಯಲ್ಲಿ ಮೂಡಿಬಂದ ಕ್ರಿಸ್ಮಸ್ ವೀಕೆಂಡ್ ನಮಗೆ ಮರೆಯಲಾಗದ ದಿನ.ಮಕಾಡೆ ಬಿದ್ದುಕೊಂಡಿರುವ ನಮ್ಮ ಶಾಲೆಯ ಮೈದಾನದಲ್ಲಿ ರಂಗೋರಂಗು...ಅದ್ಯಾವ್ಯಾವ ಊರುಗಳ ಕಾರುಗಳು ತೇಲಿ ಬಂದಿದ್ದವೋ ಕಾಣೆ,ಆದರೆ ಬೆಂಗಳೂರಿನಿಂದ ತೇಲಿಬಂದ ಬಿಳಿಯ ಕಾರೊಂದು ನಮಗೆಲ್ಲರಿಗೂ ಬೆಚ್ಚಗಿನ ಪ್ರೀತಿಯನ್ನೇ ಹರಿಸಿತು.
ಯು.ಎಸ್.ಎ ನಲ್ಲಿ ದುಡಿದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಶ್ರೀ ಗುರುಪ್ರಸಾದ್ ಹಾಗೂ ಶ್ರೀಮತಿ ಪೂರ್ಣಿಮಾ ರವರು ನಮ್ಮೊಡನೆ ಗಮ್ಮತ್ತಾಗಿ ಕಾಲಕಳೆಯಲು ಬಂದಿದ್ದರು.'ಸಮ್ಮಿಲನ 'ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿಗಳು,ಪೋಷಕರು,ಎಸ್.ಡಿ.ಎಮ್.ಸಿ.. ಅತಿಥಿಗಳು,ಶಿಕ್ಷಕರು ರೋಚಕ ಆಟಗಳಲ್ಲಿ ಭಾಗವಹಿಸಿದರು. ನಂತರ ನಡೆದ ಸಮಾರಂಭದಲ್ಲಿ 5ನೇ ತರಗತಿಯ ಪುಟಾಣಿ ಶ್ರೇಯಾ ಭಾಷಣ ಮಾಡಿ ಅತಿಥಿಗಳನ್ನು ಪರಿಚಯಿಸಿ ಸಮಾಜದಲ್ಲಿ ಸಮಾನತೆಯ ಆವಶ್ಯಕತೆಯನ್ನು ವಿವರಿಸಿದಳು.
ವಿಧ್ಯಾರ್ಥಿಗಳು -ಅತಿಥಿಗಳೊಂದಿಗೆ ನಡೆದ ಸಂವಾದ ಅರ್ಥಗರ್ಭಿತವಾಗಿ ಸಾಗಿ ವ್ಯಕ್ತಿತ್ವ ವಿಕಸನ ಹಾಗೂ ಯಶಸ್ಸಿನ ಹಾದಿಯನ್ನೆಲ್ಲಾ ಪರಿಚಯಿಸಿತು.
ಶ್ರೀಯುತರು ತಮ್ಮ ಮೂರನೇ ಕಂತಿನಲ್ಲಿ ಮತ್ತೆ ಸಾವಿರಾರು ರೂಪಾಯಿಗಳ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದರು, ಬೆಲೆಬಾಳುವ ಡಿ.ವಿ.ಡಿ.ಪ್ಲೇಯರೊಂದನ್ನೂ ಶಾಲೆಗೆ ನೀಡಿದರು. ವಿದ್ಯುತ್ಚಕ್ತಿ ಸೌಲಭ್ಯವಿಲ್ಲದ ಮಕ್ಕಳಿಗೆ ಸೋಲಾರ್ ದೀಪಗಳನ್ನು ವಿತರಿಸಿದರು,ಈಯೆಲ್ಲಾ ಕೊಡುಗೆಗಳು ನಮ್ಮೊಂದಿಗೆ ನಮ್ಮ ಪಕ್ಕದ ಶಾಲೆಗೂ ಲಭಿಸ್ತೆನ್ನಿ.
ಇದೀಗ ನಮ್ಮ ಶಾಲೆಯ ಪುಟಣಿಗಳ ಮನೆಗಳಲ್ಲಿ ಕತ್ತಲಿಲ್ಲ ಬೆಳಕಿದೆ ಮತ್ತು ಆ ಬೆಳಕಿನ ಆಸರೆಯಲ್ಲಿ ಹೊಸ ಭರವಸೆ-ಭವಿಷ್ಯ ಅರಳುತ್ತಿದೆ.ಸಮಾಜದಲ್ಲಿ ಸಮಾನತೆ,ಮಕ್ಕಳಲ್ಲಿ ಆತ್ಮವಿಶ್ವಾಸಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿರುವ ಇವರ ಕುಟುಂಬಕ್ಕೆ ಇದು ನನ್ನ ನುಡಿನಮನ....
ಅಂದಹಾಗೆ ಚಿಗುರುವ ಕನಸುಗಳಿಗೆ ಆಸರೆಯಾಗ ಬಯಸುವವರು ತಮ್ಮೂರಿನ ಅಥವಾ ಯಾವುದೇ ಸರ್ಕಾರಿ ಶಾಲೆಗೆ ಭೇಟಿ ಕೊಡಬಹುದು.
- ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..