ಒಂದು ಕಾರು ಮತ್ತೊಂದಿಷ್ಟು ಜೀವನಾನುಭವ

ನಿನ್ನೆ ಬಿ.ಇ.ಓ.ರವರ ಸಭೆಯಲ್ಲಿದ್ದಾಗಲೇ ಪತ್ನಿ ಆಸ್ಪತ್ರೆ ಸೇರಿರುವ ಸುದ್ದಿ ಕೇಳಿ ಆತುರಾತುರವಾಗಿ ಮನೆ ಸೇರಿ ಲಗೇಜು ಹೊಂದಿಸಿ ಬಸ್ಸತ್ತಿ ಬಾಳುಪೇಟೆ ತಲುಪುವಾಗಲೇ ಸೂರ್ಯ ತಣ್ಣಗೆ ಮುಳುಗಲು ಹೊರಟು ಬಿಟ್ಟಿದ್ದ.ಇನ್ನು ಬಸ್ಸು ಸಿಕ್ಕು ನಾನು ಮಂಗಳೂರು ತಲುಪುವುದು ಎಷ್ಟೊತ್ತಿಗಪ್ಪಾ ಎಂದು ತಲೆಕೆಡಿಸಿಕೊಳ್ಳುತ್ತಾ ಹಳದಿ ಬೋರ್ಡಿನ ಟ್ಯಾಕ್ಸಿ ಗಳಿಗೂ ಕೈಚಾಚತೊಡಗಿದೆ. ನನ್ನ ಅದೃಷ್ಟವೋ ಏನೋ ಒಂದು ಗಾಡಿ ಸಿಕ್ಕೇಬಿಟ್ಟಿತು.
         ಯಾರೂ ಯಾರನ್ನೂ ನಂಬುವಂತಿಲ್ಲದ ಕಾಲದಲ್ಲಿ ಅನಿವಾರ್ಯತೆಗಳು ಹೊಸ ದಾರಿಗಳನ್ನು ಸೃಷ್ಟಿಸುತ್ತವೆ.ಮತ್ತು ಇಂತಹ ಸಂದರ್ಭಗಳಲ್ಲಿ ಸಿಗುವ ಸ್ನೇಹಕ್ಕೆ ವಿಶೇಷತೆಯಿರುತ್ತದೆ. ನನಗೆ ಗಾಡಿ ನಿಲ್ಲಿಸಿದ ವ್ಯಕ್ತಿ ಮಾರುತಿ ಎಂಬ ಹೆಸರಿನವರು ವಯಸ್ಸು 26 ಮಾತ್ರ ಆದರೆ ಸಣ್ಣ ವಯಸ್ಸಿನಲ್ಲೇ ತಂದೆತಾಯಿ ಇಬ್ಬರನ್ನೂ ಕಳೆದುಕೊಂಡು ಇರುವ ಇಬ್ಬರು ತಂಗಿಯರಿಗೆ ತಾನೇ ತಂದೆಯೂತಾಯಿಯೂ ಆಗಿ  , ತಂಗಿಯರಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡು ಒಬ್ಬಳ ಮದುವೆಯನ್ನೂ ಮಾಡಿಸಿ, ಅಮ್ಮನ ಕ್ಯಾನ್ಸರ್ ಚಿಕಿತ್ಸೆಗಾಗಿ , ಅಪಘಾತಕ್ಕೀಡಾದ ಗೆಳೆಯನ ಚಿಕಿತ್ಸೆಗಾಗಿ, ಗಾಡಿ ಕೊಳ್ಳಲು ಹೀಗೆಲ್ಲಾ ಆಗಿ  ಸಾಲವಾದ ಬರೋಬ್ಬರಿ 12 ಲಕ್ಷ ರೂಪಾಯಿಗಾಗಿ ಎಲ್ಲವನನ್ನೂ ಕಳಕೊಂಡು ಊರವರಿಂದ ಸಂಬಂಧಿಕರಿಂದ ನೀನಿನ್ನು ಏಳುವುದೇ ಇಲ್ಲ ಕಣೋ ,. ನಿನ್ನ ಕಥೆ ಮುಗಿದೇ ಬಿಡ್ತು ,. ಎಂಬ ಚುಚ್ಚು ಮಾತುಗಳನ್ನೇ ಹೃದಯದಲ್ಲಿ ಬೆಚ್ಚಗಿರಿಸಿ ಸೋಲನ್ನೇ ಸವಾಲಾಗಿಸಿ ಹಗಲು ರಾತ್ರಿ ಹಟದಿಂದ ದುಡಿದು ದುಡಿದು ಕಾರನ್ನೇ ಪ್ರಪಂಚವೆಂದು ಭಾವಿಸಿ ಹಂಗಿಸಿದವರ ಬಾಯಿ ಮುಚ್ಚಿಸಲು ಊಟ ನಿದ್ರೆ ಎಲ್ಲ ಮರೆತು 26 ವರ್ಷ ತುಂಬುವಷ್ಟಕ್ಕೇ ಮಾಡಿದ 10 ಲಕ್ಷ ಸಾಲ ತೀರಿಸಿದ್ದು , ಮುದ್ದಿನ ತಂಗಿಯೊಬ್ಬಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದು ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಲ್ಲ , ಎಂಥದ್ದೇ ಸೋಲು ಮನುಷ್ಯನ ಆತ್ಮಸ್ಥೈರ್ಯಕ್ಕೆ ಸರಿಸಾಟಿಯಲ್ಲ ಎಂಬುದನ್ನ ಕಲಿಸುತ್ತೆ.
        ಒಬ್ಬ ಕ್ಯಾಬ್ ಡ್ರೈವರ್ ನ ಕಥೆ ಇಷ್ಟೊಂದು ರೋಚಕವಾಗಿರುತ್ತೆ ಎಂಬ ಕಲ್ಪನೆಯೂ ನನಗಿರಲಿಲ್ಲ. ತನ್ನೂರಿನ ತಾನು ಓದಿದ ಸರಕಾರಿ ಶಾಲೆಗೆ ಸ್ವಾಮಿ ವಿವೇಕಾನಂದರ ವಿಗ್ರಹವನ್ನು ಕೊಡುಗೆಯಾಗಿ ನೀಡುವ ಯೋಜನೆ ಮಾಡಿರುವ ಮಾರುತಿ ಸರ್ ಓದಿದ್ದು ಬರೇ ಪಿ.ಯು.ಸಿ. ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ಪರಿಪಕ್ವ ಮನಸ್ಸಿರುವ ನಮ್ಮ ನಡುವಿನ ಇಂಥ ಮಹಾನುಭಾವರು ನಮ್ಮ ಹೀರೋಗಳಾಗಬೇಕೇ ವಿನಹ ದುಡ್ಡು ಮಾಡುವ ಉದ್ದೇಶದ ಸಿನೇಮಾ ತಾರೆಯರಲ್ಲ! ಇವರ ಒಂದೊಂದು ಜೀವನಾನುಭವದ ರೋಚಕತೆಯನ್ನು ಆಸ್ವಾದಿಸುವಾಗಲೆಲ್ಲಾ ನಾನು ಇವರ ಮುಂದೆ ಕುಬ್ಜನೇನೋ ಅನ್ನಿಸತೊಡಗಿತು.
         ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅರ್ಥವಿಲ್ಲದ ಕೆಲಸಗಳನ್ನು , ಯೋಜನೆಗಳನ್ನು ಮೈತುಂಬಾ ಆವಾಹಿಸಿಕೊಂಡ ನಮ್ಮಂತಹ ಅಧಿಕಾರಿಗಳು , ಇರುವ ಅವಧಿಯಲ್ಲಿ ಪಾಠ ಮುಗಿಸುವ ಧಾವಂತಕ್ಕೆ ಜೋತು ಬಿದ್ದ ಶಿಕ್ಷಕರು  ಮತ್ತು ಹೊಡೆತ ತಿನ್ನದೇ A+ ಗಾಗಿ ತಿಣುಕಾಡುವ ವಿದ್ಯಾರ್ಥಿಗಳು ಬದುಕು ನೀಡುವ ಪರೀಕ್ಷೆಗೆ , ಹೊಡೆತಗಳಿಗೆ  ಪದೇಪದೇ ಫೇಲಾಗಿ ಹಣಸಂಪಾದನೆಯೇ ಜೀವನದ ಪರಮ ಧ್ಯೇಯವಾಗಿಸಿಕೊಂಡಿರುವುದು ದುರಂತ . 
          ಅಂದಹಾಗೇ ಈ ಮಾರುತಿ ಸರ್ ನನ್ನನ್ನು ಮಂಗಳೂರಿನ ಕೆ.ಎಮ್.ಸಿ. ಆಸ್ಪತ್ರೆ ಮುಂದೆ ಇಳಿಸಿ ಒಂದು ರೂಪಾಯಿಯೂ ತೆಗೆದುಕೊಳ್ಳದೆ ನೀವು ಮೇಷ್ಟ್ರು ನಿಮ್ಮತ್ರ ದುಡ್ಡು ತೆಗೋಬಾರ್ದು ಅಂತ ಹೇಳಿ   ಗಾಡಿ ನಡೆಸೇಬಿಟ್ರು. ಛಲದ ವ್ಯಕ್ತಿತ್ವ ಮತ್ತು ಸ್ನೇಹ ಮಾತ್ರ ಅಚ್ಚಳಿಯದೆ ನನ್ನೊಂದಿಗೆ ಉಳಿದುಬಿಟ್ಟಿದೆ.
ಈಗೀಗ ಯಾರನ್ನೂ ನಂಬುವಂತಿಲ್ಲ ಎಂಬ ಮಾತು ಸುಳ್ಳು ಬಿಡಿ.!


ಅಂದ ಹಾಗೆ ಬೆಂಗಳೂರಲ್ಲಿ ಕ್ಯಾಬ್ ಬೇಕಾದವರು ಇವರನ್ನು ಸಂಪರ್ಕಿಸಿ ಜೊತೆಗೆ ನಂಬಿಕೆ ಉಚಿತ.
7204844402 ಶ್ರೀ ಮಾರುತಿ , ಬೆಂಗಳೂರು.
      


Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..