ನೀನು ಹೋದ ರಾತ್ರಿ

ನೀನು ಹೋದ ರಾತ್ರಿ
ಆ ಬಾಗಿಲು
ತೆರೆದೇ ಇತ್ತು...

ಹೃದಯದ ಆಳದಾಳಕ್ಕೂ
ಇಳಿದ ಕೆಂಪು ಬೇರುಗಳು
ತಮ್ಮಷ್ಟಕ್ಕೇ ಇರಿದುಕೊಳ್ಳುತ್ತಿದ್ದವು;

ಹೊದ್ದುಕೊಂಡಷ್ಟೂ ಮಲಗದ
ಈ ಕಣ್ರೆಪ್ಪೆಗಳಿಗೂ
ಗಲ್ಲ ಜಾರುವ ಬಿಸಿ ಕಂಬನಿಯೆಡೆ
ಗೂಢಚರ್ಯ...

ನೀನು ಹೋದ ರಾತ್ರಿಯಲಿ
ನಿಜಕ್ಕೂ ಬೆಳದಿಂಗಳಿಲ್ಲ,
ಅದೇನಿದ್ದರೂ
ಆ ಕೂಸ ಕಣ್ಣೊಳಗೆ ಹುಡುಕಬೇಕಷ್ಟೇ..,

ನೀನು ಹೋದ ರಾತ್ರಿ
ಕೆಂಪಿಗೂ- ಬಿಳುಪಿಗೂ
ಸಂಧಾನ ಸಭೆ,
ಅವೆರಡೂ ಸೇರಿ ನಡೆದೂ ನಡೆದೂ
ಇದೀಗ ಎಲ್ಲೆಲ್ಲೂ ಕಪ್ಪು ಕತ್ತಲು...

ನಿಜ ನಿಜ..
ನೀನು ಹೋದ ರಾತ್ರಿ
ಆ ಬಾಗಿಲು ತೆರೆದೇ ಇತ್ತು..
ಬಂದೂಕಿನ ನಳಿಕೆಗಳು
ಕೊಂಚವಷ್ಟೇ ಇಣುಕಿತು,
ಲಾಂಗು ಮಚ್ಚುಗಳಿಗೆ
ಕೊಂಚವಷ್ಟೇ ಬಾಯಾರಿತು..

ಶ್...
ಮಣ್ಣ ಹೊದ್ದು ಮಲಗಿದೆ ಕೂಸು
ಎಚ್ಚರ...ಎಚ್ಚರ...

- ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..