ಆಶಾವಾದಿ ಕಿರಣ


ಅರುಣೋದಯದ ಕಿರಣಗಳೊಂದಿಗೆ
ಒಂದು ಬೆಳಕಿನ ಕಿರಣ
ಆತ್ಮವನ್ನೇ ಸೀಳಿ ಪಿಸುಗುಟ್ಟಿತು - 
ಹಿಮ್ಮೆಟ್ಟಬೇಡ...
ನಾನೇ.. ಆಶಾವಾದಿ...

ಹೊತ್ತೇರುವ ಮುನ್ನವೇ
ಒಲೆಯೇರಿದ ಮಡಕೆಯಲಿ
ಬೇಯಲು ಅನ್ನವಿಲ್ಲ,
ಕುದಿಯುತ್ತಿರುವುದು ಮಾತ್ರ ಬಿಸಿರಕ್ತ;
ಬೇಯುತ್ತಿರುವ ತರಕಾರಿಯಲ್ಲೂ
ಗುಡಿಸಲ ತುಂಬ ಬೆಂದ ಮಾಂಸದ ಘಮಲು;

ಮನದೊಳಗೂ ಮನೆಯೊಳಗೂ ಕಾದಾಟ
ತಡೆಯಲಾರದೆ ಅಂಗಳಕ್ಕಿಳಿದರೆ
ಅದೇ ಬೆಳಕಿನ ಕಿರಣದ ಆಲಿಂಗನ
ಆಡುವ ಕಂದಮ್ಮಗಳದ್ದು ಮಾತ್ರ ಮಾರಾಮಾರಿ
ನೆರೆಮನೆಯವನ ಹೋಮ- ಹವನ ವ್ಯರ್ಥ 
ನಮ್ಮ ಧರ್ಮಗಳಿಗೇಕೆ ಈ ಗ್ರಹಣ!?

ಆ ಕಿರಣ ನನ್ನನ್ನು ಮುನ್ನಡೆಸುತ್ತಿದೆ
ಜತೆಗೆ ನೆತ್ತಿ ಸುಡುವ ಬಿಸಿಲು
ನೆರೆಯವನ ಕಾಂಪೌಂಡು ಮಾತ್ರ ಸಂಬಂಧಗಳ ಹೂತು ನಿರಾಳವಾಗಿದೆ

ಆಶಾವಾದಿ ಕಿರಣ ಪಿಸುಗುಟ್ಟುತ್ತಿದೆ - 
ಬದಲಾವಣೆಗೆ ಹಾತೊರೆಯುತ್ತಿರುವೆ...
ದಿನದಿನವೂ ಕಾಯುತ್ತಿರುವೆ...


ಕೊಂಕಣಿ ಮೂಲ: ಪ್ರಸನ್ನ ನಿಡ್ಡೋಡಿ , ಮುಂಬಯಿ
ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ

Comments

Post a Comment

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..