ಕಡಲ ಹೆಣ






ಇಗೋ ನೋಡಿ
ದಡ ಸೇರಿದೆ
ಕಡಲ ಹೆಣ!


ಅದೆಷ್ಟು ನೀರು ಕುಡಿದಿದೆಯೋ ಕಾಣೆ
ಸಾಧ್ಯವಾದಷ್ಟೂ ನೀಲಿಯಾಗಿದೆ
ವಿಷಪ್ರಾಶನವಾಗಿರಲಿಕ್ಕೂ ಸಾಕು!


ತೊಯ್ದಾಡುವ ಅಲೆಗಳ
ಉನ್ಮತ್ತ ಸ್ಖಲನಗಳೂ
ಇದೀಗ ಮುಚ್ಚಿಟ್ಟ ಸತ್ಯ!
ಮರಣೋತ್ತರ ಪರೀಕ್ಷೆಯ ರಿಪೋರ್ಟು
ಇನ್ನು ಬರಬೇಕಷ್ಟೇ...



ಒದ್ದೇ ಮರಳಿನ ತುಂಬಾ
ಹಾಹಕಾರ- ನಿಟ್ಟುಸಿರುಗಳ
ಹೆಜ್ಜೆಗುರುತುಗಳು,
ಆವಿಯಾಗುವ ನೀಲಹನಿಗಳ ತುಂಬಾ
ಅಗಾಧತೆಯ ನಿಗೂಢ ಕನಸುಗಳು;
ಕಡಲಿನ ಒಡಲ ಬೇಗೆಯನೆಲ್ಲಾ
ಕಣ್ತುಂಬಿಸಿಕೊಂಡ ನಾಯಿಗೂ
ಆ ಸಿಂದಾಬಾದಿನದೇ ಚಿಂತೆ;


ಒಂದೇ ಒಂದು ಉಬ್ಬರವಿಳಿತ ಸಾಕು
ಕಡಲ ಹೆಣವ ಹೂವಾಗಿಸಲು
ಗರಿಗೆದರುವ ಬಲೆಗಳ ಹಸಿರಾಗಿಸಲು
ಹೊಟ್ಟೆ ಚುರುಗುಟ್ಟುವ
ಹರಕಲು ಚಡ್ಡಿಯವನ
ಮುಖವರಳಿಸಲು...



ಬಾ ಕಡಲೇ ಬಾ...
ಈ ಬರಗೆಟ್ಟ ಕಿನಾರೆಗಳ ಇಲ್ಲವಾಗಿಸು
ಈ ಕಡಲ ಹೆಣವ
ನೋಹನ ನಾವೆಯಾಗಿಸು

- ಜಾನ್ ಸುಂಟಿಕೊಪ್ಪ.


(ನೋಹ ಬೈಬಲಿನ ಒಬ್ಬ ಪುಣ್ಯ ಪುರುಷ ,ಜಲಪ್ರಳಯ ಬಂದಾಗ ದೇವರ ಆಜ್ನಾನುಸಾರ ಒಂದು ನಾವೆಯನ್ನು ಕಟ್ಟಿ  ಸಕಲ ಜೀವಜಂತುಗಳಲ್ಲಿ ಒಂದೊಂದು ಜತೆಯನ್ನು ಕಾಪಾಡಿದವ.)

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..