ಕೋಣೆ
ಇಗೋ...
ಬದುಕಿನ ಕೋಣೆಯೊಳಗೆ
ವಸ್ತುಗಳು ಬದಲಾಗುತ್ತಿಲ್ಲ .,
ಹಸಿದ ಕಿಟಕಿಗಳ ದಾಹಕ್ಕೆ
ಕಣ್ಣ ತಂಪಾಗಿಸಲು ಪ್ರಯತ್ನಿಸುತ್ತೇನೆ
ಆದರೆ
ಚಿಲಕಗಳ ಸದ್ದು ಇನ್ನೂ ಬದಲಾಗಿಲ್ಲ,,
ಆ ಮೇಜು ಕುರ್ಚಿಯ ಸ಼ಂಬಂಧ
ಇನ್ನೂ ಹಾಗೆಯೇ ಇದೆ
ಕೆಲವೊಮ್ಮೆ ಹತ್ತಿರ
ಕೆಲವೊಮ್ಮೆ ದೂರ,,
ಇವುಗಳ ನಡುವೆ ಅಕ್ಷರಗಳ ಸೇತುವೆ
ಪೋಣಿಸುತಿರುವೆ,,.
ಮತ್ತೆ ಆ ಮಂಚ
ಅದಕ್ಕಿನ್ನೂ ಸಾವಿಲ್ಲ?!
ವ್ಯಗ್ರಗೊಂಡ ಯೌವನದಲೇ
ಕಾಲ ಕಳೆಯುತ್ತಿದೆ,,
ಹೊಸ್ತಿಲ ದಾಟಿ ಬರಲು
ನಾನೂ ಕಾಯುತಿರುವೆ
ಆದರೆ ನನ್ನೊಳಗಿನ ಪುರುಷ ಸಿದ್ಧನಿಲ್ಲ ?!
ಬಾಗಿಲ ಬಳಿ ಬಿದ್ದಿರುವ ಆ ಚಪ್ಪಲಿಗಳು
ನೆನಪುಗಳ ಭಾರಕ್ಕೆ ಜಗ್ಗಿಹೋಗಿವೆ
ಮಣ್ಣು ಮೆತ್ತಿ ಬಣ್ಣಗಳ ಮರೆಸಿವೆ,
ಎರಡು ಗೋಡೆಗಳ ನಡುವೆ ಜೋತುಬಿದ್ದ ಹಗ್ಗ
ಇನ್ನೂ ಒಳವಸ್ತ್ರಗಳ ಹೊತ್ತಿವೆ,
ಅಂತರಂಗದ ಭಾರ ತಾಳದೆ ಕೊಂಚ ಬಾಗಿವೆ.,,
ತಣ್ಣಗೆ ತುಕ್ಕು ಹಿಡಿಯುತ್ತಿರುವ ಬಾಗಿಲ
ಕೀಲುಗಳಿಗೆ ನಾಚಿಕೆಯೇ ಇಲ್ಲ.,
ಪದೇ ಪದೇ ನೆನಪಿಸಿಕೊಂಡರೂ
ಒಳ ಬಂದವರ ಎಣಿಕೆ ಸಿಗುತ್ತಿಲ್ಲ
ಹೊರ ಹೋದವರೆಷ್ಟೋ ,,,
ಮತ್ತು ನಾನು
ಕೋಣೆ ತುಂಬಿದ ನಗು ಅಳು ಏದುಸಿರುಗಳಲ್ಲಿ
ಮುಳುಗಿ ಉಸಿರುಗಟ್ಟುತ್ತಿದ್ದೇನೆ,
ಬಹುಶಃ
ಹಳಸಿದ ವಾಸನೆ
ಕೋಣೆಯ ಹೊರಗೂ ಇದೆ,,,
- ಜಾನ್ ಸುಂಟಿಕೊಪ್ಪ.
Comments
Post a Comment