ಮೆಟ್ರೋ
ಪುರುಸೊತ್ತಿಲ್ಲದ ನಗರ
ಮಾನವೀಯತೆಗಾಗಿ ಬಾಯಾರಿದೆ ...
ಜೇಬುಗಳ್ಳನ ಕರಾಮತ್ತು
ತಲೆಹಿಡುಕನ ಕೈಚಳಕ
ಕೆಂಪು ಬೀದಿಯ ಕಾಮದ ವಾಸನೆ -
ಆಕಾಶದಲ್ಲಿ ಹದ್ದುಗಳು ಹಾರುತ್ತವೆ...
ಗಿರಾಕಿಗೆ ಟೋಪಿಯನ್ನಿಕ್ಕಿದ
ವ್ಯಾಪಾರಿ ನೋಟನೆಣಿಸಿ
ಗಲ್ಲಾಪೆಟ್ಟಿಗೆಗೆ ಸೇರಿಸುತ್ತಾನೆ
ಕಣ್ಣಲ್ಲಿ ಮಿಂಚೋ ... ಸಂಚೋ...
ಮಾಂಸದ ಬೀದಿಯಲಿ
ಕೋಳಿ ಕುರಿ ದನ ಹಂದಿಗಳು
ಬೆತ್ತಲೆ ನೇತಾಡುತ್ತವೆ ...
ನೆತ್ತರ ನೆಕ್ಕಲು ಮಚ್ಚಿಗೆ ಹಗಲಾದರೇನು
ಇರುಳಾದರೇನು
ಟಿ.ವಿ, ಮಿಕ್ಸಿ, ಗಾಡಿಗಳ ಸದ್ದಿಗೆ
ಒಳವಸ್ತ್ರ ಹರಿದ ಸದ್ದು ಕೇಳುವುದೇ ಇಲ್ಲ..
ಸೈಜುಗಲ್ಲು ಬಿದ್ದ ತಲೆಯೂ
ಕಾಣಸಿಗುವುದು ಇರುವೆ ಮುತ್ತಿದ ಮೇಲೇ...
ಅಪರಿಚಿತರೂರಲ್ಲಿ
ಸಾವಿನೇಜಂಟನೇನು ಪರಿಚಿತನೇ ?!
ಇಂದೋ ನಿನ್ನೆಯೋ ಅವನಿಟ್ಟ ಬಾಂಬು
ಸ್ಪೋಟಿಸಿ ಛಿದ್ರಗೊಳಿಸುತ್ತವೆ ಕನಸುಗಳನ್ನು
ಟಿ.ವಿ. , ಪೇಪರ್, ಬಾಯಿಮಾತುಗಳೂ
ಮಾನವೀಯತೆಯ ಭಾಷಣ ಆರಂಭವಾಗುತ್ತದೆ
ನೇರ - ದಿಟ್ಟ - ನಿರಂತರ
ಪುಂಖಾನುಪುಂಖ ಜಾಹೀರಾತುಗಳೊಂದಿಗೆ...
-ಜಾನ್ ಸುಂಟಿಕೊಪ್ಪ ,
Comments
Post a Comment