***** ದಾಂಪತ್ಯ*****
ಹೃದಯ ಹೃದಯಗಳ ಸಮ್ಮಿಲನ
ಎರಡು ದೇಹ ಒಂದಾಗಿ
ಮನಸು ಕರಗಿದೆ,
ಇಳೆಯೆಲ್ಲಾ
ಇಬ್ಬನಿ ತಬ್ಬಿದ ಅನುಭವ;
ಬಿಸುಪಿನ ಆರೋಹಣ-ಅವರೋಹಣ
ನಗ್ನತೆಯಲ್ಲಿ ಮಾತ್ರ,
ಇರುಳಿನ ಕರುಳೊಳಗೆ
ತೊಳಲಾಡಿದಾಗಷ್ಟೇ ಕಾಮಕ್ಕೆ ಕೆಲಸ;
ಕೈಗೊಂದು ಕಾಲಿಗೊಂದು ಅಡರುವ
ಆ ಕಂದಮ್ಮಗಳ ಮುದ್ದು ಮಾಯೆ
ನಾಳಿನ ಅಸಹಾಯಕತೆಯ ಬಂಡವಾಳವಷ್ಟೇ;
ಅವನ ಬಿಗಿತವೆಲ್ಲಾ ಕೊಸರಾಟವಾಗಿ
ಅವಳ ಚಂಚಲತೆಯೆಲ್ಲಾ ನಿಟ್ಟುಸಿರಾಗಿ
ದಾಂಪತ್ಯ ಬದಲಾಗುವುದರಲ್ಲಿ ಸಂಶಯವಿಲ್ಲ;
ಕಾಮದ ಸುಳಿಗೆ ಸಿಕ್ಕ ಪ್ರೀತಿ
ಮುಳುಗಿ ಏಳಿ ಮುಳುಗಿ ಏಳಿ
ಕಡೆಗೊಮ್ಮೆ
ಅನಾಥ ಹೆಣವಾಗುತ್ತದೆ;
ಇತ್ತ
ಅಹಮ್ಮಿನ ಬಸಿರು ಕಟ್ಟಿ
ಆ ಬಸಿರು ಬೆಳೆದಂತೆ
ಗೋಡೆಗೋಡೆಗಳೆಲ್ಲಾ ಜೈಲುಕಂಬಗಳಾಗಿ
ತೆರೆದ ಕಿಟಕಿ ಬಾಗಿಲುಗಳು
ಕನಸುಗಳ ಕೈ ಬೀಸಿ ಕರೆಯುತ್ತವೆ;
ಮಾತಿನ ಮುತ್ತು ಮುಳ್ಳಾಗಿ
ಎದೆಯ ತುಂಬಾ ಗೀರಿದ ಗಾಯವಾಗಿ
ಕಣ್ಣೀರು ಕರಗಿ
ಇಬ್ಬನಿ ತಬ್ಬಿದ ನೆಲ
ಬರಡು ಬರಡು,,,,..
ನನಗೀಗ ಚಿಂತೆ,
ತೂತುಗೊಂಡಿರುವುದು
ನನ್ನ ಮನೆಯ ದೋಸೆಯೋ
ಕಾವಲಿಯೋ....
- ಜಾನ್ ಸುಂಟಿಕೊಪ್ಪ. ಕೊಡಗು.
Comments
Post a Comment